ಬೆಂಗಳೂರು, ಏ. 17 (DaijiworldNews/HR): ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಚಿಕ್ಸಿತ್ರೆಗಾಗಿ ಮಣಿಪಾಲ್ ಆಸ್ಪತ್ರೆ ಸೇರಲು ಇಚ್ಛಿಸಿದ್ದು ಸದ್ಯ ಅಲ್ಲಿ ಅವರಿಗೆ ಬೆಡ್ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಕುಮಾರಸ್ವಾಮಿ ಅವರು ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಹೋಗಿದ್ದು, ಶುಕ್ರವಾರ ಸಂಜೆ ದೇಹದಲ್ಲಿ ದಣಿವು ಕಂಡು ಬಂದು ಬಳಿಕ ಬೆಂಗಳೂರಿಗೆ ಹಿಂದಿರುಗಿ ಮನೆಗೆ ಹೋಗದೆ ಹೋಟೆಲ್ ಒಂದರಲ್ಲಿ ಉಳಿದುಕೊಂಡಿದ್ದರು.
ಶನಿವಾರ ಬೆಳಿಗ್ಗೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಗಾದ ಅವರಿಗೆ ಕೊರೊನಾ ಪಾಸಿಟಿವ್ ಇರುವುದು ಧೃಢಪಟ್ಟಿದೆ. ಬಳಿಕ ವೈದ್ಯರ ಬಳಿ ಮಾತುಕತೆ ನಡೆಸಿ, ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಚಿಕಿತ್ಸೆ ಪಡೆಯುವುದಾಗಿ ಅವರು ಹೇಳಿದ್ದಾರಾದರು ಆದರೆ ವೈದ್ಯರು ತಕ್ಷಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸಲಹೆ ನೀಡಿದ್ದಾರೆ.
ವೈದ್ಯರ ಮಾತಿನಂತೆ ಮಣಿಪಾಲ್ ಆಸ್ಪತ್ರೆ ಸೇರಲು ನಿರ್ಧರಿಸಿದ ಎಚ್ಡಿಕೆ ಸಂಬಂಧಿಸಿದವರನ್ನು ಸಂಪರ್ಕಿಸಿದರೆ, ಬೆಡ್ ಇಲ್ಲ ಎಂಬ ಉತ್ತರ ಸಿಕ್ಕಿದೆ. ಈ ಮಧ್ಯೆ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಸುಧಾಕರ್ ಅವರು ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿ ಕೊಡಲು ಯತ್ನಿಸಿದ್ದಾರಾದರೂ ಅದು ಫಲ ಕೊಟ್ಟಿಲ್ಲ ಎನ್ನಲಾಗಿದೆ.