ಬೆಂಗಳೂರು, ಏ.17 (DaijiworldNews/MB) : ''ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರು ಆಡಳಿತದ ಹೊರತಾಗಿ ಚುನಾವಣೆಯ ಬಗ್ಗೆ ಮಾತ್ರ ಚಿಂತೆ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ'' ಎಂದು ಟೀಕೆ ಮಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಕೊರೊನಾ ರೋಗಿಗಳಿಗೆ ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ ನೀಡಬೇಕು'' ಎಂದು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ''ಕೊರೊನಾ 2 ನೇ ಅಲೆ ಬಿಜೆಪಿಯ ಆಡಳಿತದ ಕೇಂದ್ರ ಹಾಗೂ ರಾಜ್ಯ ಸರ್ಕಾರದಡಿ ದುರ್ಬಲವಾಗಿರುವ ಸಾರ್ವಜನಿಕ ಆರೈಕೆ ವ್ಯವಸ್ಥೆಯನ್ನು ಬಹಿರಂಗಪಡಿಸಿದೆ. ಕೊರೊನಾಕ್ಕೆ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಜನರು ಅಸಹಾಯಕರಾಗಿದ್ದಾರೆ'' ಎಂದು ಹೇಳಿದ್ದಾರೆ.
''1 ನೇ ಅಲೆಯ ವೇಳೆ ಭಾರತಕ್ಕೆ ಗಂಭೀರ ಅನುಭವವಾಗಿದೆ. ಆದರೂ ಸರ್ಕಾರ ಯಾವುದೇ ಪಾಠ ಕಲಿತಿಲ್ಲ. ಕೊರೊನಾ ಚಿಕಿತ್ಸೆಗೆ ವ್ಯಾಪಕವಾಗಿ ಬಳಸಲಾಗುವ ರೆಮ್ಡೆಸಿವಿರ್ ಲಭ್ಯವಿಲ್ಲ. ಸರ್ಕಾರ ಔಷಧಿಗಳ ವಿಚಾರದಲ್ಲಿ ಏಕೆ ಹೀಗಿದೆ'' ಎಂದು ಪ್ರಶ್ನಿಸಿದ್ದಾರೆ.
''ಕೊರೊನಾ ರೋಗಿಗಳಿಗೆ ಸಾಮಾನ್ಯ ಮತ್ತು ಐಸಿಯು ಹಾಸಿಗೆಗಳ ಕೊರತೆಯೂ ಇದೆ. ಆಕ್ಸಿಜನ್ ಹಾಗೂ ಇತರ ವ್ಯವಸ್ಥೆಗಳಿಲ್ಲದೆ ಜನರು ಬಳಲುತ್ತಿದ್ದಾರೆ. ಸಾರ್ವಜನಿಕ ಆರೋಗ್ಯ ಬಿಕ್ಕಟ್ಟನ್ನು ಪರಿಹರಿಸುವ ಬದಲು ಆಂತರಿಕ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ಸರ್ಕಾರ ನಿರತವಾಗಿದೆ'' ಎಂದು ಟೀಕಿಸಿದ್ದಾರೆ.
''ಸರ್ಕಾರಿ ಆಸ್ಪತ್ರೆಗಳು ತುಂಬಿ ಹೋಗಿರುವುದರಿಂದ ಜನರು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳತ್ತ ಸಾಗುತ್ತಿದ್ದಾರೆ. ಖಾಸಗಿ ಆಸ್ಪತ್ರೆಯ ಶುಲ್ಕವನ್ನು ಭರಿಸಲು ಅನೇಕರಿಗೆ ಸಾಧ್ಯವಾಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ಎಲ್ಲಾ ರೋಗಿಗಳಿಗೆ ಉಚಿತ ಕೊರೊನಾ ಚಿಕಿತ್ಸೆ ನೀಡಲು ನಾನು ಮುಖ್ಯಮಂತ್ರಿ ಹಾಗೂ ಕರ್ನಾಟಕ ಆರೋಗ್ಯ ಇಲಾಖೆಗೆ ವಿನಂತಿ ಮಾಡುತ್ತೇನೆ'' ಎಂದು ಕೂಡಾ ಸಿದ್ದರಾಮಯ್ಯ ಹೇಳಿದ್ದಾರೆ.
''ಬಿಜೆಪಿಯ ಕೇಂದ್ರ ಹಾಗೂ ರಾಜ್ಯ ನಾಯಕರು ಆಡಳಿತದ ಹೊರತಾಗಿ ಚುನಾವಣೆಯ ಬಗ್ಗೆ ಮಾತ್ರ ಚಿಂತೆ ಮಾಡುತ್ತಿರುವುದು ನಿಜಕ್ಕೂ ದುರದೃಷ್ಟಕರ. ಕರ್ನಾಟಕದ ಬಿಜೆಪಿ ನಾಯಕರು ಸಾರ್ವಜನಿಕರಿಗೆ ಕೊರೊನಾ ಮಾರ್ಗಸೂಚಿ ಬೋಧಿಸಿ ಅವರು ಯಾಕೆ ಅನುಸರಿಸುತ್ತಿಲ್ಲ'' ಎಂದು ಪ್ರಶ್ನಿಸಿದ್ದಾರೆ.