ಬೆಂಗಳೂರು, ಎ.17 (DaijiworldNews/PY): "ಜಮಖಂಡಿ ತಾಲೂಕಿನಲ್ಲಿ ಕರ್ತವ್ಯಕ್ಕೆ ಹಾಜರಾದ ಸಾರಿಗೆ ನೌಕರರನ್ನು ಕಲ್ಲು ಹೊಡೆದು ಸಾಯಿಸಿದ ಘಟನೆ ಅತ್ಯಂತ ಹೇಯಕರ" ಎಂದು ಸಚಿವ ಸುರೇಶ್ ಕುಮಾರ್ ಖಂಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸಾರ್ವಜನಿಕರ ಹಿತಕ್ಕಾಗಿ ಬಸ್ ಓಡಿಸಲು ಸೇವೆಗೆ ಹಾಜರಾದ ಸಾರಿಗೆ ಇಲಾಖೆಯ ಚಾಲಕ ರೊಬ್ಬರನ್ನು ಮುಷ್ಕರ ನಿರತ ಸಾರಿಗೆ ಇಲಾಖೆಯ ಅವರ ಸ್ನೇಹಿತರೇ ಕಲ್ಲು ಹೊಡೆದು ಸಾಯಿಸಿದ ಘಟನೆ ಅತ್ಯಂತ ಹೇಯಕರ" ಎಂದಿದ್ದಾರೆ.
ಜಮಖಂಡಿ ತಾಲೂಕಿನ ಕವಟಿಗಿ ಪುನರ್ವಸತಿ ಕೇಂದ್ರದ ಬಳಿ ಎಪ್ರಿಲ್ 16ರ ಶುಕ್ರವಾರ ಕರ್ತವ್ಯಕ್ಕೆ ಹಾಜರಾಗಿದ್ದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಚಾಲಕ ನಬಿ ರಸೂಲ್ ಆವಟಿ (59) ಎನ್ನುವವರನ್ನು ಅಪರಿಚಿತ ದುಷ್ಕರ್ಮಿಗಳು ಕಲ್ಲು ಹೊಡೆದು ಹತ್ಯೆ ಮಾಡಿದ್ದರು. ಈ ಘಟನೆಗೆ ವ್ಯಾಪಕವಾದ ವಿರೋಧ ವ್ಯಕ್ತವಾಗುತ್ತಿದೆ.
ಸಾರಿಗೆ ನೌಕರರ ಮುಷ್ಕರದ ನಡುವೆಯೂ ನಬಿ ರಸೂಲ್ ಅವರು ಮೇಲಾಧಿಕಾರಿಗಳ ಕರೆಯಂತೆ ಕರ್ತವ್ಯಕೆಕ ಹಾಜರಾಗಿದ್ದರು. ಈ ಕಾರಣದಿಂದ ಆಕ್ರೋಶಗೊಂಡ ದುಷ್ಕರ್ಮಿಗಳ ತಂಡ ನಬಿ ರಸೂಲ್ ಅವರನ್ನು ಕಲ್ಲು ಹೊಡೆದು ಹತ್ಯೆಗೈದಿದ್ದರು.
ಘಟನೆಯ ಬಗ್ಗೆ ಸಂತಾಪ ವ್ಯಕ್ತಪಡಿಸಿರುವ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ ಅವರು ಮೃತಪಟ್ಟ ಚಾಲಕನ ಕುಟುಂಬದವರನ್ನು ಭೇಟಿ ಮಾಡಿದ್ದು, ಸಾಂತ್ವಾನ ಹೇಳಿದ್ದಾರೆ. ಮೃತ ಚಾಲಕನ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಿದ್ದಾರೆ.