ನವದೆಹಲಿ, ಏ 17 (DaijiworldNews/MS): ಗಣರಾಜ್ಯೋತ್ಸವ ದಿನದಂದು ಕೆಂಪು ಕೋಟೆ ದ್ವಜ ಹಾರಿಸಿ ಧಾಂದಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟ ದೀಪ್ ಸಿಧು ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ದೆಹಲಿಯ ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿ ರೈತರು ಹಿಂಸಾಚಾರ ನಡೆಸಲು ಪ್ರೇರಣೆ ನೀಡಿದ್ದ ಆರೋಪವನ್ನು ದೀಪ್ ಸಿಧು ಎದುರಿಸುತ್ತಿದ್ದಾರೆ. ಆದರೆ ಇದನ್ನು ಅಲ್ಲಗಳೆದಿದ್ದ ಸಿಧು ಪ್ರತಿಭಟನೆಯ ಭಾಗವಾಗಿದ್ದ ಪ್ರಾಮಾಣಿಕ ಪ್ರಜೆಯಷ್ಟೇ ನಾನು ಎಂದಿದ್ದರು. ಇವರ ಪತ್ತೆಗೂ ಮುನ್ನ, ದೆಹಲಿ ಪೊಲೀಸರು ಇವರ ಸುಳಿವು ನೀಡಿದವರಿಗೆ1 ಲಕ್ಷ ರೂ.ಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ವಿವಾದಾತ್ಮಕ ಮೂರು ಕೃಷಿ ಕಾನೂನುಗಳ ರದ್ಧತಿಗೆ ಒತ್ತಾಯಿಸಿ ಜನವರಿ 26 ರಂದು ರೈತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸುತ್ತಿದ್ದ ವೇಳೆಯಲ್ಲಿ ಪೊಲೀಸರು ಹಾಗೂ ಪ್ರತಿಭಟನಾ ನಿರತ ಸಹಸ್ರಾರು ರೈತರ ನಡುವೆ ಸಂಘರ್ಘ ಭುಗಿಲೆದ್ದಿತ್ತು.
ಅನೇಕ ಉದ್ರಿಕ್ತರು ಕೆಂಪುಕೋಟೆಯವರೆಗೂ ಟ್ರ್ಯಾಕ್ಟರ್ ಚಾಲನೆ ಮಾಡಿ, ಧರ್ಮವೊಂದರ ಬಾವುಟವನ್ನು ಆರೋಹಣ ಮಾಡಿದ್ದರು. ಈ ವೇಳೆ ಪ್ರತಿಭಟನಾಕಾರನೊಬ್ಬ ಮೃತಪಟ್ಟು, ಸುಮಾರು 500 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಕೆಂಪು ಕೋಟೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ ಐಆರ್ ದಾಖಲಿಸಿದ್ದರು.