ಬೆಂಗಳೂರು, ಏ.17 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರ ಏರಿಕೆ ಕಾಣುತ್ತಿದೆ. ಈ ಮಧ್ಯೆ ಬೆಳಗಾವಿಯ ಲೋಕಸಭಾ ಸ್ಥಾನಕ್ಕೆ ಹಾಗೂ ಬಸವಕಲ್ಯಾಣ, ಮಸ್ಕಿ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯು ಶನಿವಾರ ನಡೆಯುತ್ತಿವೆ.
ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷದ ಕಾಂಗ್ರೆಸ್ ಪಕ್ಷ ಈ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದು ಈಗಾಗಲೇ ಭರ್ಜರಿ ಪ್ರಚಾರ ನಡೆಸಿದೆ.
ಬೆಳಗಾವಿಯಲ್ಲಿ 10, ಬಸವಕಲ್ಯಾಣದಲ್ಲಿ 12 ಮತ್ತು ಮಸ್ಕಿಯಲ್ಲಿ ಎಂಟು ಸೇರಿದಂತೆ 30 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ 26 ಪುರುಷರು ಮತ್ತು ನಾಲ್ಕು ಮಹಿಳೆಯರು. ಬೆಳಗಾವಿ, ಮಸ್ಕಿಯಲ್ಲಿ ತಲಾ ಐದು ಮಂದಿ ಸ್ವತಂತ್ರ ಅಭ್ಯರ್ಥಿಗಳು ಹಾಗೂ ಬಸವಕಲ್ಯಾಣದಲ್ಲಿ ನಾಲ್ವರು ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೂರು ಸ್ಥಾನಗಳಲ್ಲಿ 22,59,778 ಮತದಾರರಿದ್ದಾರೆ. ಬೆಳಗಾವಿಯಲ್ಲಿ 18,13,567 ಮಂದಿ, ಬಸವಕಲ್ಯಾಣದಲ್ಲಿ 2,39,782 ಹಾಗೂ ಮಸ್ಕಿಯಲ್ಲಿ 2,06,429 ಮತದಾರರು ಇದ್ದಾರೆ. ಮೂರು ಕ್ಷೇತ್ರಗಳ 3,197 ಮತಗಟ್ಟೆಗಳಲ್ಲಿ ಮತದಾರರು ಮತ ಚಲಾವಣೆ ಮಾಡುತ್ತಿದ್ದಾರೆ. ಮೇ 2 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ.
ಕೊರೊನಾ ಸುರಕ್ಷತಾ ನಿಯಮಗಳನ್ನು ಪಾಲಿಸಲು ಅನುಕೂಲವಾಗುವಂತೆ ಬೆಳಿಗ್ಗೆ 7 ರಿಂದ ಸಂಜೆ 7 ರವರೆಗೆ ಮತದಾನವು ನಡೆಯಲಿದೆ. ಕೊನೆಯ ಒಂದು ಗಂಟೆ ಕೊರೊನಾ ಪಾಸಿಟಿವ್ ರೋಗಿಗಳು ಮತ ಚಲಾಯಿಸಲು ಕಾಯ್ದಿರಿಸಲಾಗಿದೆ.
ನಾಲ್ಕು ಬಾರಿ ಲೋಕಸಭಾ ಸದಸ್ಯರಾದ ಸುರೇಶ್ ಅಂಗಡಿ ಅವರು 2020 ರ ಸೆಪ್ಟೆಂಬರ್ 23 ರಂದು ನವದೆಹಲಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಕಾರಣ ತೆರವಾದ ಬೆಳಗಾವಿ ಲೋಕಸಭಾ ಹಾಗೂ ಬಸವಕಲ್ಯಾಣ ವಿಧಾನಸಭಾ ಸ್ಥಾನಗಳಲ್ಲಿ ಉಪಚುನಾವಣೆ ನಡೆಯಲಿದೆ. ಆದರೆ 2018 ರಲ್ಲಿ ಕಾಂಗ್ರೆಸ್ ಟಿಕೆಟ್ನಲ್ಲಿ ಗೆದ್ದ ನಂತರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದ ಶಾಸಕ ಪ್ರತಾಪಗೌಡ ಪಾಟೀಲ್ ಅವರನ್ನು ಅನರ್ಹಗೊಳಿಸಿದ ಕಾರಣ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.
ಉತ್ತಮ ಆಡಳಿತದ ಕೊರತೆ, ಕರ್ನಾಟಕದ ಕೊರೊನಾ ಪರಿಸ್ಥಿತಿ, ಮೀಸಲಾತಿ ವಿಚಾರವನ್ನು ಬಿಜೆಪಿ ವಿರುದ್ದ ಮತಯಾಚನೆಗೆ ಬಳಸಿಕೊಂಡ ಕಾಂಗ್ರೆಸ್ ರಮೇಶ್ ಜಾರಕಿಹೊಳಿ ಕಿರಿಯ ಸಹೋದರ ತಮ್ಮ ಪಕ್ಷದಿಂದ ಬೆಳಗಾವಿಯಲ್ಲಿ ಕಣಕ್ಕಿಳಿದಿರುವ ಹಿನ್ನೆಲೆ ಈ ಪ್ರಕರಣವನ್ನು ಮತದಾನಯಾಚನೆಯಲ್ಲಿ ಬಳಸಿಲ್ಲ.
2018 ರಲ್ಲಿ ಕಾಂಗ್ರೆಸ್ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದು, ಉಪಚುನಾವಣೆಯಲ್ಲಿ ಅದನ್ನು ಉಳಿಸಿಕೊಳ್ಳುವ ಭರವಸೆ ಹೊಂದಿದೆ. ಆಡಳಿತರೂಢ ಬಿಜೆಪಿ ನಿಧನರಾದ ಸುರೇಶ್ ಅಂಗಡಿಯವರ ಪತ್ನಿಯನ್ನು ಬೆಳಗಾವಿಯಲ್ಲಿ ಕಣಕ್ಕಿಳಿಸಿದೆ. ಬಸವಕಲ್ಯಾಣದಲ್ಲಿ ಬಿಜೆಪಿಯ ನಾಯಕ ಶರಣು ಸಲಗರ್ ವಿರುದ್ಧ ದಿವಂಗತ ಶಾಸಕ ಬಿ.ನಾರಾಯಣ್ ರಾವ್ ಅವರ ಪತ್ನಿ ಮಲ್ಲಮ್ಮ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಮಲ್ಲಮ್ಮ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಮಲ್ಲಿಕಾರ್ಜುನ ಖೂಬಾ ಕೂಡಾ ಸ್ವತಂತ್ರ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಜೆಡಿಎಸ್ನಿಂದ ಸೈಯದ್ ಯಸ್ರಾಬ್ ಅವರು ಕಣದಲ್ಲಿದ್ದಾರೆ.
ಮಸ್ಕಿಯಲ್ಲಿ ಕಾಂಗ್ರೆಸ್ ನ ಬಸನಗೌಡ ತುರ್ವಿಹಾಲ್ ವಿರುದ್ಧ 2018 ರಲ್ಲಿ ವಿಜೇತರಾಗಿ ಹೊರಹೊಮ್ಮಿದ ಪ್ರತಾಪಗೌಡ ಪಾಟೀಲ್ ಅವರನ್ನು ಬಿಜೆಪಿ ಸ್ಪರ್ಧೆಗೆ ಇಳಿಸಿದೆ.