ಬೀದರ್, ಏ 17 (DaijiworldNews/MS):ಚುನಾವಣೆ ಬಂತೆಂದರೆ ಕದ್ದು ಮುಚ್ಚಿ ಪಕ್ಷಗಳು ಹಣ - ಹೆಂಡ ಹಂಚಿ ಮತದಾರರಿಗೆ ಆಮಿಷವೊಡ್ಡುತ್ತಾರೆ. ಈ ಮದ್ಯೆ ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ಹಣ ಹಂಚುತ್ತಿದ್ದ ಆರೋಪದ ಮೇರೆಗೆ ಶಂಕಿತ ಬಿಜೆಪಿ ಕಾರ್ಯಕರ್ತನಿಗೆ ತಾಲೂಕಿನ ತ್ರೀಪುರಾಂತದಲ್ಲಿ ಸ್ಥಳೀಯರು ಹಲ್ಲೆ ನಡೆಸಿದ ಘಟನೆ ಶುಕ್ರವಾರ ಜರುಗಿದೆ.
ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಪರವಾಗಿ ಹಣ ಹಂಚಲು ಬಂದಿದ್ದ ಎನ್ನಲಾದ ವ್ಯಕ್ತಿಗೆಯನ್ನು ಹಿಡಿದ ಗ್ರಾಮಸ್ಥರು, ರಾಜಕೀಯ ಪಕ್ಷಗಳೇ ಮತದಾರರನ್ನು ಭ್ರಷ್ಟರನ್ನಾಗಿ ಮಾಡುತ್ತಿವೆ ಎಂದು ಆರೋಪಿಸಿದ್ದಲ್ಲದೇ ವ್ಯಕ್ತಿಗೆ ಚಪ್ಪಲಿಯೇಟು ನೀಡಿದ್ದಾರೆ.
ಬಸವಕಲ್ಯಾಣ ಉಪಚುನಾವಣೆಯ ಮುನ್ನಾ ದಿನವಾದ ಶುಕ್ರವಾರ ಸಂಜೆ ಮತದಾರರಿಗೆ ಹಂಚಲು ಬಂದ ಆತನನ್ನು ಹಿಡಿದು ಆತನ ಬಳಿಯಿದ್ದ ಹಣವನ್ನು ನೆಲದಮೇಲೆ ಹಾಗೂ ಗಾಳಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಚುನಾವಣಾ ವೀಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.