ಚೆನ್ನೈ, ಏ 17 (DaijiworldNews/MS): ಹಾಸ್ಯನಟನಾಗಿ ಖ್ಯಾತಿ ಗಳಿಸಿರುವ ತಮಿಳು ಚಿತ್ರರಂಗದ ಹಿರಿಯ ನಟ ವಿವೇಕ್ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ವಿವೇಕ್ ಚಿಕಿತ್ಸೆ ಫಲಿಸದೇ ಏಪ್ರಿಲ್ 17ರ ಮುಂಜಾನೆ 4.30 ರ ವೇಳೆಗೆ ನಿಧನರಾಗಿದ್ದಾರೆ.
ವಿವೇಕ್ ಅವರಿಗೆ ಗುರುವಾರ ಎದೆನೋವು ಕಾಣಿಸಿಕೊಂಡ ಪರಿಣಾಮ ಚೆನ್ನೈನ ಸಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಡ ಮುಂಭಾಗದ ಅಪಧಮನಿ ನಾಳವು ಶೇ 100 ರಷ್ಟು ಬ್ಲಾಕ್ ಆಗಿದ್ದು, ತೀವ್ರತರವಾದ ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ವೈದ್ಯರು ತಿಳಿಸಿದ್ದರು. ಬಳಿಕ ವೈದ್ಯರ ತಂಡ ಆರೋಗ್ಯ ಪರೀಕ್ಷಿಸಿದ ನಂತರ ವಿವೇಕ್ ಅವರು ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೃದ್ರೋಗ ತಜ್ಞರ ತಂಡ ಅವರ ಆರೋಗ್ಯವನ್ನು ನಿರಂತರವಾಗಿ ಗಮನಿಸುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ವಿವೇಕ್ ಅವರ ಹೃದಯಾಘಾತಕ್ಕೆ ಗುರುವಾರ ತೆಗೆದುಕೊಂಡ ಕೋವಿಡ್ ಲಸಿಕೆ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿದ ತಮಿಳುನಾಡು ಸರ್ಕಾರದ ಆರೋಗ್ಯ ಕಾರ್ಯದರ್ಶಿ ಜೆ. ರಾಧಾಕೃಷ್ಣನ್ ಹೃದಯಾಘಾತಕ್ಕೆ ಲಸಿಕೆ ಕಾರಣವಲ್ಲ ಎಂದಿದ್ದರು.
ತಮಿಳುನಾಡು ಫಿಲ್ಮ್ಫೇರ್ ಅವಾರ್ಡ್, ತಮಿಳುನಾಡು ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ವಿವೇಕ್ ತಮ್ಮದಾಗಿಸಿಕೊಂಡಿದ್ದರು. ಅದರಲ್ಲೂ ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿಗೆ ವಿವೇಕ್ 2009ರಲ್ಲಿ ಭಾಜನರಾಗಿದ್ದರು.