ಬೆಂಗಳೂರು, ಏ. 16 (DaijiworldNews/SM): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟ ಹಿನ್ನೆಲೆಯಲ್ಲಿ ಸರ್ವಪಕ್ಷ ಸಭೆಯನ್ನು ಮುಂದೂಡಲಾಗಿದೆ.
ಕೊರೋನಾ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಿಸುವ ಕ್ರಮಗಳ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಯವರು ಸರ್ವಪಕ್ಷಗಳ ಸಭೆ ಕರೆದಿದ್ದರು. ಏಪ್ರಿಲ್ 18ರಂದು ಸಂಜೆ 4 ಗಂಟೆಗೆ ಸರ್ವಪಕ್ಷಗಳ ಸಭೆ ನಿಗದಿಯಾಗಿತ್ತು. ಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನು ಆಹ್ವಾನಿಸಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲು ತೀರ್ಮಾನಿಸಲಾಗಿತ್ತು. ಅದರ ಬಳಿಕ ಪ್ರಮುಖ ವಿಚಾರಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಸಭೆ ಕರೆದಿದ್ದರು.
ಆದರೆ, ಇದೀಗ ಸರ್ವಪಕ್ಷಸಭೆಯನ್ನು ಮುಂದೂಡಲಾಗಿದೆ. ಆದರೆ, ಮುಂದಿನ ಸಭೆಯ ದಿನಾಂಕವನ್ನು ನಿಗದಿಗೊಳಿಸಿಲ್ಲ. ಮುಖ್ಯಮಂತ್ರಿಗಳು ಗುಣಮುಖರಾದ ಬಳಿಕ ಸಭೆ ನಡೆಸುವ ಸಾಧ್ಯತೆ ಇದೆ.