ಬೆಂಗಳೂರು, ಏ 16 (DaijiworldNews/MS): ಕಳೆದೆರಡು ದಿನಗಳಿಂದ ಜ್ವರ, ಸುಸ್ತಿನಿಂದ ಬಳಲುತ್ತಿದ್ದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಿ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ. ಬೆಳಗ್ಗೆ ತಮ್ಮ ನಿವಾಸದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಜೊತೆಗೆ ತುರ್ತು ಸಭೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಕೂಡಾ ಪಾಲ್ಗೊಂಡಿದ್ದರು. ಈ ಹಿನ್ನಲೆಯಲ್ಲಿ ಸಚಿವರು ಕ್ವಾರಂಟೈನ್ ಆಗುವ ಬಗ್ಗೆ ಪ್ರಶ್ನೆ ಉದ್ಬವಿಸಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ಸಚಿವರು, ಕರ್ತವ್ಯ ಮುಂದುವರಿಸುವುದು ಅತ್ಯಂತ ಅನಿವಾರ್ಯವಾಗಿರುವುದರಿಂದ ಕ್ವಾರಂಟೈನ್ ಗೆ ಒಳಗಾಗದೇ ಕನಿಷ್ಟ ಜನರ ಸಂಪರ್ಕದೊಂದಿಗೆ ಕೆಲಸದಲ್ಲಿ ತೊಡಗುತ್ತೇನೆ ಎಂದು ಹೇಳಿದ್ದಾರೆ.
ಸಚಿವರು ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದು, " ಮುಖ್ಯಮಂತ್ರಿಗಳಿಗೆ ಕೊರೊನಾ ಸೋಂಕು ಧೃಢಪಟ್ಟಿರುವ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ನಾನು ಕ್ವಾರಂಟೈನ್ ಆಗಬೇಕೇ ಎಂಬ ಪ್ರಶ್ನೆ ವ್ಯಕ್ತವಾಗಿದೆ.ಇಂದು ನಡೆದ ಸಭೆ ಮುಖ್ಯಮಂತ್ರಿಗಳ ಅಧಿಕೃತ ನಿವಾಸದ ಹೊರಾಂಗಣದಲ್ಲಿ ನಡೆದಿದ್ದು, ಭೌತಿಕ ಅಂತರ, ಮಾಸ್ಕ್ ಧರಿಸುವ ಮುನ್ನೆಚ್ಚರಿಕೆಗಳನ್ನು ಪಾಲಿಸಲಾಗಿತ್ತು".
"ಕೋವಿಡ್ ಎರಡನೇ ಅಲೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ರಾಜ್ಯದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವನ ಸ್ಥಾನದಲ್ಲಿ ಸ್ವತಃ ಮುಂಚೂಣಿ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿರುವ ನಾನು ನನ್ನ ಕರ್ತವ್ಯವನ್ನು ಎಂದಿನಂತೆ ಮುಂದುವರಿಸುವುದು ಅತ್ಯಂತ ಅನಿವಾರ್ಯವಾಗಿದೆ. ಆದ್ದರಿಂದ ಸಾಮಾಜಿಕ ಅಂತರ, ಮಾಸ್ಕ್ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತ ಕನಿಷ್ಠ ಜನಸಂಪರ್ಕದೊಂದಿಗೆ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತೇನೆ. ನಾಲ್ಕು ದಿನಗಳ ನಂತರ ಕೊರೊನಾ ಪರೀಕ್ಷೆಗೆ ಒಳಪಡುತ್ತೇನೆ ಎಂದು ಹೇಳಿದ್ದಾರೆ.