ಬೆಂಗಳೂರು, ಎ.16 (DaijiworldNews/PY): "ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ" ಎಂದು ಕಾಂಗ್ರೆಸ್ ಕಿಡಿಕಾರಿದೆ.
ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಎರಡೇ ಬಾರಿ ಕೊರೊನಾ ದೃಢವಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಈ ಹಿಂದೆ ಕೊರೋನಾ ಸೋಂಕಿತರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದರು. ಇಂತರ ಸರ್ಕಾರದಿಂದ ಸೋಂಕು ನಿಯಂತ್ರಣ ಸಾಧ್ಯವೇ?" ಎಂದು ಪ್ರಶ್ನಿಸಿದೆ.
"ರಾಜ್ಯಾದ್ಯಂತ ಲಸಿಕೆ ಕೊರತೆಯಾಗಿರುವ ವರದಿಗಳು ಪ್ರತಿ ದಿನವೂ ಬರುತ್ತಿವೆ. ಆದರೂ ಆತ್ಮವಂಚನೆಯ ಸುಳ್ಳು ಹೇಳುವ ಬಿಜೆಪಿಗೆ ಕೊಂಚವೂ ಲಜ್ಜೆ ಇದ್ದಂತಿಲ್ಲ. ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸುವ ಅನುಮತಿಯನ್ನು ಕೇಂದ್ರ ಏಕೆ ನೀಡುತ್ತಿಲ್ಲ? ಈ ಬಗ್ಗೆ ಧ್ವನಿ ಎತ್ತುವ ಧೈರ್ಯ ಏಕೆ ತೋರುತ್ತಿಲ್ಲ ತಾವು?" ಎಂದು ಕೇಳಿದೆ.
"ಲಸಿಕೆಗಳ ಪರಿಣಾಮದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಕ್ಕೆ ಇಂದು ಪುರಾವೆ ಸಿಕ್ಕಿದೆಯಲ್ಲ ಬಿಜೆಪಿ ಲಸಿಕೆಗಳು ಪರಿಣಾಮಕಾರಿಯಾಗಿದ್ದರೆ ಲಸಿಕೆ ಪಡೆದಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೋಂಕು ತಗುಲಿದ್ದು ಹೇಗೆ, ಏಕೆ?. ಲಸಿಕೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಸೋಂಕಿನ ಪ್ರಭಾವ ಕಡಿಮೆಗೊಳಿಸುತ್ತದೆ ಹೊರತು ಅದೇ ಮದ್ದಾಗುವುದಿಲ್ಲ ತಿಳಿಯಿರಿ" ಎಂದಿದೆ.
"ಬಿಜೆಪಿ, ಚಿತ್ರಗಳೇ ನಿಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆಯ ಕತೆ ಹೇಳುತ್ತಿವೆ. ಪ್ರತಿ ದಿನದ ಕೇಸ್ಗಳಲ್ಲಿ ಜಗತ್ತಿನಲ್ಲಿ ನಂ1. ಒಟ್ಟು ಸೋಂಕಿತರಲ್ಲಿ ಜಗತ್ತಿನ ನಂ2. ಸಕ್ರಿಯ ಸೋಂಕಿತರಲ್ಲಿ ಜಗತ್ತಿನ ನಂ2. ಸಾವಿನ ಪ್ರಮಾಣದಲ್ಲಿ ಜಗತ್ತಿನ ನಂ4. ದೇಶದ ಇಂತಹ ಸ್ಥಿತಿಯ ನಡುವೆಯೂ ಸುಳ್ಳು ಹೇಳುವ ಕಲೆ ನಿಮಗೆ ಮಾತ್ರ ಸಿದ್ಧಿಸಿದ್ದು!" ಎಂದು ಟೀಕಿಸಿದೆ.
"ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೋನಾದಿಂದ ಜನ ತತ್ತರಿಸುತ್ತಿದ್ದರೂ ಚುನಾವಣಾ ಪ್ರಚಾರದ ದೊಡ್ಡ ದೊಡ್ಡ ರ್ಯಾಲಿ ನಡೆಸಿದ್ದರು. ಇಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಕರೋನಾಕ್ಕೆ ತತ್ತರಿಸುತ್ತಿದ್ದರೂ ಸ್ವತಃ ಜ್ವರದಿಂದ ಬಳಲುತ್ತಿದ್ದರೂ ಚುನಾವಣಾ ಪ್ರಚಾರ ನಡೆಸಿದ್ದರು. ಆಡಳಿತಾರೂಢ ಬಿಜೆಪಿಗೆ ಕರೋನಾ ನಿಯಂತ್ರಣಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಸಿಎಂ ಬಿಎಸ್ವೈ ಅವರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆ ಶುಭಹಾರೈಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ "ಕೊರೊನಾ ಸೋಂಕು ತಗುಲಿರುವ ಸುದ್ದಿ ತಿಳಿದು ಬೇಸರವಾಯಿತು. ಆದಷ್ಟು ಶೀಘ್ರ ಅವರು ಗುಣಮುಖರಾಗಲಿ ಎಂದು ಹಾರೈಸುತ್ತೇನೆ" ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿದ್ದು, "ಸಿಎಂ ಯಡಿಯೂರಪ್ಪ ಅವರು ಕೊರೊನಾದಿಂದ ಶೀಘ್ರವೇ ಗುಣಮುಖರಾಗಲಿ" ಎಂದು ಶುಭಕೋರಿದ್ದಾರೆ.
ಕಳೆದೆರಡು ದಿನಗಳಿಂದ ಜ್ವರದಿಂದ ಬಳಲುತ್ತಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಿಎಂ ಅವರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ವರದಿಯಲ್ಲಿ ಪಾಸಿಟಿವ್ ಬಂದಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಶುಕ್ರವಾರ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.