ಹನೂರು, ಏ.16 (DaijiworldNews/HR): "ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ನಡೆಯಲಿವೆ" ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕರ್ನಾಟಕದಲ್ಲಿ ಜೂನ್ 21 ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭ ಮಾಡುವ ಬಗ್ಗೆ ಈಗಾಗಲೇ ತೀರ್ಮಾನ ಮಾಡಲಾಗಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲು ಇನ್ನೂ 2 ತಿಂಗಳು 1 ವಾರ ಬಾಕಿ ಇದೆ. ಪರೀಕ್ಷೆ ನಡೆಸುವ ಕುರಿತು ಆರೋಗ್ಯ ಇಲಾಖೆಯಿಂದ ವರದಿ ಕೇಳಿದ್ದೇವೆ. ವರದಿ ಶೀಘ್ರದಲ್ಲಿಯೇ ಶಿಕ್ಷಣ ಇಲಾಖೆಯ ಕೈ ಸೇರಲಿದೆ. ಇನ್ನೂ ಸಮಯವಿರುವುದರಿಂದಾಗಿ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುವುದು" ಎಂದರು.
ಇನ್ನು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ವಿಧಾನ ಪರಿಷತ್ ಸಭಾಪತಿ ಅವರು ಕೂಡ ಪರೀಕ್ಷೆ ನಡೆಯಬೇಕು ಎಂದು ಪತ್ರ ಬರೆದಿದ್ದಾರೆ ಎಂದಿದ್ದಾರೆ.
ಇನ್ನು 1ರಿಂದ 5 ಮತ್ತು 6 ರಿಂದ 9 ನೇ ತರಗತಿ ಪರೀಕ್ಷೆ ಬಗ್ಗೆ ಇನ್ನೂ ತೀರ್ಮಾನ ಆಗಿಲ್ಲ. 1 ರಿಂದ 9 ನೇ ತರಗತಿಗಳಿಗೆ ಪರೀಕ್ಷೆ ಮಾಡುವ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಲಾಗಿದ್ದು, ಶೀಘ್ರವಾಗಿ ಪರೀಕ್ಷೆಯ ಬಗ್ಗೆ ನಿರ್ಧರಿಸಲಾಗುವುದು" ಎಂದು ಹೇಳಿದ್ದಾರೆ.