ಮಂಡ್ಯ, ಎ.15 (DaijiworldNews/PY): ಪ್ರೇಮ ಪ್ರಕರಣ ವಿಚಾರಕ್ಕೆ ಸಂಬಂಧಿಸಿದಂತೆ ಬಾಲನೋರ್ವನನ್ನು ಗಂಭೀರವಾಗಿ ಹತ್ಯೆ ಮಾಡಿದ ಘಟನೆ ನಗರದ ಕಲ್ಲಹಳ್ಳಿ ಬಡಾವಣೆಯಲ್ಲಿ ಎಪ್ರಿಲ್ 14ರ ಬುಧವಾರದಂದು ನಡೆದಿದೆ.
ಕಲ್ಲಹಳ್ಳಿಯ 17 ವರ್ಷದ ಬಾಲಕ ಅದೇ ಬಡಾವಣೆಯ ಬಾಲಕಿಯೋರ್ವಳನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ತಿಳಿದ ಬಾಲಕಿಯ ಮನೆಯವರು ಬುಧವಾರ ರಾತ್ರಿ ಬಾಲಕನನ್ನು ಮನೆಗೆ ಕರೆದಿದ್ದು, ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಬಾಲಕ ಗಂಭೀರ ಗಾಯಗೊಂಡಿದ್ದು, ಆತನಿಗೆ ಮುಂಜಾನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬಾಲಕನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಮೃತ ಬಾಲಕನ ತಂದೆ ಯುವತಿಯ ತಂದೆ ಶಿವಲಿಂಗು ವಿರುದ್ದ ಆರೋಪ ಮಾಡಿದ್ದು, ಮಗನ ಮೇಲೆ ಹಲ್ಲೆ ಮಾಡಿದ ಶಿವಲಿಂಗುವನ್ನು ಬಂಧಿಸುವಂತೆ ಬಾಲಕಿಯ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಘಟನೆಯ ಪರಿಣಾಮ ಸ್ವಲ್ಪ ಸಮಯದವರೆಗೆ ಕಲ್ಲಹಳ್ಳಿಯಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು.
ಇದಾದ ಬಳಿಕ ಮೃತ ಬಾಲಕನ ಪೋಷಕರು ಶವದೊಂದಿಗೆ ಪಶ್ಚಿಮ ಪೊಲೀಸ್ ಠಾಣೆಯ ಎದುರಿಟ್ಟು ಧರಣಿ ನಡೆಸಲು ತೀರ್ಮಾನಿಸಿದ್ದಾರೆ.
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ.