ಬೆಂಗಳೂರು, ಏ. 14 (DaijiworldNews/SM): ರಾಜ್ಯದಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಈ ನಡುವೆ ಹಲವು ಬಸ್ ಗಳಿಗೆ ಹಾನಿಗೊಳಿಸಲಾಗಿದ್ದು, ಇದನ್ನು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಖಂಡಿಸಿದ್ದಾರೆ.
ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೆ.ಎಸ್.ಆರ್.ಟಿ.ಸಿ.ಯ 34, ಬಿ.ಎಂ.ಟಿ.ಸಿ.ಯ 3, ಈಶಾನ್ಯ ಸಾರಿಗೆಯ 20 ಮತ್ತು ವಾಯುವ್ಯ ಸಾರಿಗೆಯ 3 ಬಸ್ಸುಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 60 ಸಾವಿರ ಬಸ್ ಗಳಿಗೆ ಹಾನಿಗೊಳಿಸಲಾಗಿದೆ. ಇದರಲ್ಲಿ ಕೆಲವು ದುಬಾರಿ ಬಸ್ ಗಳು ಕೂಡ ಸೇರಿಕೊಂಡಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಸ್ ಗಳಿಗೆ ಯಾರು ಹಾನಿಯುಂಟು ಮಾಡಿದ್ದಾರೆ ಅವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಡಿಸಿಎಂ ಸವದಿ ತಿಳಿಸಿದ್ದಾರೆ.
ಬಸ್ಸುಗಳಿಂದಲೇ ನಮ್ಮ ಲಕ್ಷಾಂತರ ಸಾರಿಗೆ ನೌಕರರು ಜೀವನ ಸಾಗಿಸುತ್ತಿದ್ದಾರೆ. ಇಂತಹ ಬಸ್ ಗಳಿಗೆ ಹಾನಿ ಮಾಡಿ ತಲೆ ಮೇಲೆ ಕಲ್ಲು ಹಾಕಿಕೊಂಡಿದ್ದಾರೆ. ಹೀಗಿರುವಾಗ ಹಿಂಸೆಯಿಂದ ಯಾರೂ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಕಾನೂನು ಕೈಗೆತ್ತಿಕೊಂಡವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಈಗಾಗಲೇ ಮುಷ್ಕರದಿಂದಾಗಿ 152 ಕೋಟಿ ರೂ. ಆದಾಯ ಬರದೇ ನಷ್ಟವಾಗಿದೆ. ಬಸ್ ಗಳಿಗೆ ಹಾನಿಗೊಳಿಸಿ ಮತ್ತಷ್ಟು ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.