ರಾಯಚೂರು, ಏ.14 (DaijiworldNews/HR): "ಕೊರೊನಾ ಆರಂಭದಿಂದಲೂ ಕರ್ನಾಟಕದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದಿತ್ತು. ಮುಂದೆಯೂ ಸರ್ಕಾರ ಕೊರೊನಾಗೆ ಸಮರ್ಪಕ ನಿರ್ವಹಣೆ ಮಾಡುವುದಿಲ್ಲ. ಹಾಗಾಗಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿ ಮಾಡಬೇಕು" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಈ ಕುರಿತು ಮಸ್ಕಿ ಉಪಚುನಾವಣೆ ಪ್ರಚಾರಕ್ಕಾಗಿ ಬುಧವಾರ ಸಿಂಧನೂರಿಗೆ ಬಂದಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಜೆಪಿಯವರು ಅಧಿಕಾರ ತ್ಯಾಗ ಮಾಡಿ ಬಿಟ್ಟುಹೋಗಲಿ, ಕೊರೊನಾ ಸಂಕಷ್ಟದಲ್ಲೂ ಆಸ್ಪತ್ರೆ, ಪಿಪಿಇ ಕಿಟ್ , ಔಷಧಿಯಲ್ಲಿಯೂ ದುಡ್ಡು ಹೊಡೆಯುವುದಕ್ಕೆ ಯೋಚಿಸುತ್ತಾರೆ. ಇವರಿಂದ ಅಧಿಕಾರ ನಡೆಸುವುದಕ್ಕೆ ಆಗುವುದಿಲ್ಲ. ಕೊರೊನಾ ನಿರ್ವಹಣೆ ಸರ್ಕಾರ ಸಂಪೂರ್ಣ ವಿಫಲವಾಗಿದೆ" ಎಂದರು.
ಇನ್ನು "ಕೊರೊನಾ ಲಸಿಕೆಯನ್ನು ವಿದೇಶಗಳಿಗೆ ಹಂಚುತ್ತಿರುವ ಪ್ರಧಾನಿ ಮೋದಿಯವರು ಅಂತರರಾಷ್ಟ್ರೀಯ ನಾಯಕರಾಗಲು ಹೊರಟಿದ್ದಾರೆ. ಮೊದಲು ನಮ್ಮ ದೇಶದ ಜನರನ್ನು ಉಳಿಸಲು ಆದ್ಯತೆ ನೀಡಬೇಕು" ಎಂದು ಹೇಳಿದ್ದಾರೆ.