ಬೆಂಗಳೂರು, ಏ.14 (DaijiworldNews/HR): "ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಯಾರೇ ಆಗಲಿ ಆಡಳಿತದಲ್ಲಿ ಅನುಭವವಿರುವವರು ಜನರ ಕಣ್ಣಿಗೆ ಮಂಕುಬೂದಿ ಎರಚುವ ಕೆಲಸ ಮಾಡಬೇಡಿ" ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ನಿಯಂತ್ರಿಸಲು ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಯಕರುಗಳು ಸರ್ಕಾರಕ್ಕೆ ಸೂಕ್ತ ಸಲಹೆ ನೀಡಬೇಕೆ ಹೊರತು ಜನರನ್ನು ದಿಕ್ಕುತಪ್ಪಿಸುವ ಕೆಲಸ ಮಾಡಬಾರದು" ಎಂದರು.
"ಪ್ರತಿಪಕ್ಷಗಳು ಈವರೆಗೂ ಸರ್ಕಾರಕ್ಕೆ ಯಾವತ್ತಾದರೂ ಒಂದೇ ಒಂದು ಉತ್ತಮವಾದ ಸಲಹೆ ನೀಡಿದ್ದಾವಾ ಎಮ್ದು ಪ್ರಶ್ನಿಸಿರುವ ಅವರು,"ಕೇವಲ ನಕಾರಾತ್ಮಕವಾಗಿ ಮಾತನಾಡುವುದೇ ಅವರಿಗೆ ಅಭ್ಯಾಸವಾಗಿದ್ದು, ಪ್ರತಿಯೊಂದನ್ನೂ ಟೀಕೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ" ಎಂದಿದ್ದಾರೆ.
ಇನ್ನು "13 ಬಾರಿ ಬಜೆಟ್ ಮಂಡನೆ ಮಾಡಿರುವ ಸಿದ್ದರಾಮಯ್ಯ ಹಾಗೂ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಆಡಳಿತದಲ್ಲಿ ಅಪಾರ ಅನುಭವವುಳ್ಳವರಾಗಿದ್ದು, ಸರ್ಕಾರಕ್ಕೆ ಇಂತಹ ಸಂದರ್ಭದಲ್ಲಿ ಸಲಹೆ ಕೊಡಬೇಕೆ ಹೊರತು ನಕಾರಾತ್ಮಕ ಟೀಕೆ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ" ಎಂದು ಹೇಳಿದ್ದಾರೆ.