ಬೆಂಗಳೂರು, ಏ.14 (DaijiworldNews/MB) : ಈಗ ಮೊಸಳೆ ಕಣ್ಣೀರು ಸುರಿಸಿ ನಾಯಕ ಎನಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮಕಾಂಗ್ರೆಸ್ ಸರ್ಕಾರ ಇದ್ದಾಗ ಪೊಲೀಸರೇ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದರು. ಅದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ ಎಂದು ಸಿದ್ದರಾಮಯ್ಯ ವಿರುದ್ದ ಬಿಜೆಪಿ ಕಿಡಿಕಾರಿದೆ.
''ಕೆಎಸ್ಆರ್ಟಿಸಿ ನೌಕರರ ಮುಷ್ಕರವನ್ನು ಬಿಜೆಪಿ ಸರ್ಕಾರ ಪೊಲೀಸ್ ಬಲದ ಮೂಲಕ ದಮನಿಸಲು ಹೊರಟಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ವಿರೋಧಿ ಮಾತ್ರವಲ್ಲ ಅಮಾನವೀಯ ನಡೆ ಕೂಡಾ ಆಗಿದೆ'' ಎಂದು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಮಾನ್ಯ ಸಿದ್ದರಾಮಯ್ಯ ಅವರೇ, ನಿಮ್ಮದೇ ಕಾಂಗ್ರೆಸ್ ಸರ್ಕಾರ ಇದ್ದಾಗ ಪೊಲೀಸರೇ ಸರ್ಕಾರದ ವಿರುದ್ಧ ದಂಗೆ ಎದ್ದಿದ್ದರು. ರಾಜ್ಯದ ಇತಿಹಾಸದಲ್ಲೇ ಅದೊಂದು ಕಪ್ಪು ಚುಕ್ಕೆ. ಕೆಳ ಹಂತದ ಪೊಲೀಸ್ ಸಿಬ್ಬಂದಿಯನ್ನು ನೀವು ದಮನಿಸಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಈಗ ಮೊಸಳೆ ಕಣ್ಣೀರು ಸುರಿಸಿ ನಾಯಕ ಎನಿಸಿಕೊಳ್ಳಲು ಸಾಧ್ಯವಿಲ್ಲ'' ಎಂದು ಹೇಳಿದೆ.
''ವಿಫಲ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ರೈತರ ಆತ್ಮಹತ್ಯಾ ಪ್ರಕರಣದ ಮೆರವಣಿಗೆಯೇ ನಡೆದಿತ್ತು. ಬೆಳಗಾವಿಯಲ್ಲಿ ವಿಠಲ್ ಅರಬಾವಿ ಎಂಬ ರೈತ ಆತ್ಮಹತ್ಯೆ ಮಾಡಿಕೊಂಡಾಗ, ಕುಡಿದು ಸತ್ತ ಎಂದು ವ್ಯಂಗ್ಯವಾಡಿದ್ದೀರಿ. ನವಲಗುಂದದಲ್ಲಿ ರೈತರ ಮೇಲೆ ಮಾರಣಾಂತಿಕ ಲಾಠಿ ಚಾರ್ಜ್ ಮಾಡಿದ್ದು ಮರೆತು ಹೋಯಿತೇ?'' ಎಂದು ಪ್ರಶ್ನಿಸಿದೆ.
''ಮಾನ್ಯ ಸಿದ್ದರಾಮಯ್ಯ ಅವರೇ, ಡಿ. ಕೆ. ರವಿ ನಿಗೂಢ ಸಾವು, ಡಿವೈಎಸ್ಪಿ ಗಣಪತಿ ಸಾವು, ಪರೇಶ್ ಮೇಸ್ತಾ ಕಗ್ಗೊಲೆ ಸಂದರ್ಭದಲ್ಲಿ ನೊಂದವರಿಗೆ ಸಾಂತ್ವನ ಹೇಳುವ ಸೌಜನ್ಯವನ್ನೂ ನೀವು ತೋರಿರಲಿಲ್ಲ. ಈಗ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ಪರ ವಕಾಲತ್ತು ವಹಿಸುತ್ತಿರುವುದೇಕೆ?'' ಎಂದು ಕೂಡಾ ಕೇಳಿದ್ದಾರೆ.