ನವದೆಹಲಿ, ಏ.14 (DaijiworldNews/HR): "ಕೇಂದ್ರ ಸರ್ಕಾರವು ತಮ್ಮ ಪಕ್ಷ ನೀಡಿದ್ದ ಸಲಹೆ ಮೇರೆಗೆ ವಿದೇಶದಲ್ಲಿ ತಯಾರಿಸಿದ ಕೊರೊನಾ ವಿರುದ್ಧದ ಲಸಿಕೆಗೆ ತುರ್ತು ಅನುಮೋದನೆ ನೀಡಿದೆ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಲಸಿಕೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ರಾಹುಲ್ ಗಾಂಧಿ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು, ಫಾರ್ಮಾ ಕಂಪನಿಗಳ ಪರ ರಾಹುಲ್ ಗಾಂಧಿ ಲಾಬಿ ನಡೆಸುತ್ತಿದ್ದಾರೆ ಎಂದು ದೂರಿದ್ದರು.
ಇನ್ನು ಕೇಂದ್ರ ಸರ್ಕಾರದ ಪ್ರತಿಕ್ರಿಯೆಯನ್ನು ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಮೊದಲು ನಿಮ್ಮನ್ನು ಕಡೆಗಣಿಸುತ್ತಾರೆ. ನಂತರ, ನಿಮ್ಮನ್ನು ನೋಡಿ ನಗುತ್ತಾರೆ. ಬಳಿಕ, ನಿಮ್ಮ ಜತೆ ಜಗಳ ತೆಗೆಯುತ್ತಾರೆ. ಕೊನೆಯಲ್ಲಿ, ನೀವೇ ಗೆಲ್ಲುತ್ತೀರಿ" ಎನ್ನುವ ಮಹಾತ್ಮ ಗಾಂಧಿ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
ಬೇರೆ ದೇಶಗಳು ಅನುಮೋದನೆ ನೀಡಿರುವ ವಿದೇಶದಲ್ಲಿ ತಯಾರಿಸಿದ ಲಸಿಕೆಗಳಿಗೆ ತುರ್ತು ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಹೇಳಿದ್ದು, ಕೊರೊನಾ ಲಸಿಕೆಗಳ ಬಳಕೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮಕೈಗೊಳ್ಳಲಾಗಿದೆ ಎಂದಿದೆ.