ಚಂಡೀಗಢ, ಏ.14 (DaijiworldNews/MB) : ಹನ್ನೆರಡನೇ ತರಗತಿಯ ಬಾಲಕನೋರ್ವ ಅನಾರೋಗ್ಯದಲ್ಲಿ ಹಾಸಿಗೆಯಲ್ಲೇ ಮಲಗಿದ ಸ್ಥಿತಿಯಲ್ಲಿರುವ ತನ್ನ 83 ವರ್ಷದ ಅಜ್ಜಿ ಮೊಬೈಲ್ನಲ್ಲೇ ಕಾಲಕಳೆಯುವ ಬದಲು ಓದು ಎಂದು ಹೇಳಿದ ಕಾರಣಕ್ಕೆ ಕೋಪಗೊಂಡು ಅಜ್ಜಿಯ ಮೇಲೆ ರಾಡ್ನಿಂದ ಅಮಾನುಷ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.
ಅಜ್ಜಿಯನ್ನು ಹತ್ಯೆಗೈದ ಬಳಿಕ ಆ 16 ವರ್ಷದ ಬಾಲಕ ಅಜ್ಜಿಯ ದೇಹಕ್ಕೆ ಬೆಂಕಿಹಚ್ಚಿದ್ದು, ತಾನು ಕೋಣೆಯಲ್ಲಿ ಇದ್ದು ತನ್ನನ್ನು ಕೋಣೆಗೆ ತಳ್ಳಿದ ದರೋಡೆಕೋರರು ಅಜ್ಜಿಯನ್ನು ಕೊಂದಿದ್ದಾರೆ ಎಂದು ಹೇಳಿ ನಟಿಸಿದ್ದಾನೆ. ಅಪರಾಧ ನಡೆದ ಸಮಯದಲ್ಲಿ ಬಾಲಕನ ಪೋಷಕರು ಮನೆಯಲ್ಲಿ ಇರಲಿಲ್ಲ.
ಪೊಲೀಸರ ಪ್ರಕಾರ, ಬಾಲಕ ಮಂಗಳವಾರ ತನ್ನ ಅಜ್ಜಿಯ ತಲೆಗೆ ಕಬ್ಬಿಣದ ರಾಡ್ನಿಂದ ಹೊಡೆದು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಇನ್ನು ಈ ಕೃತ್ಯವನ್ನು ಆತ ಧಾರಾವಾಹಿಯಿಂದ ಪ್ರೇರೇಪಿತನಾಗಿ ಮಾಡಿದ್ದಾನೆ ಎಂದು ಕೂಡಾ ಆತ ಪೊಲೀಸರಿಗೆ ತಿಳಿಸಿದ್ದಾನೆ.
ಈ ಕೃತ್ಯ ಎಸಗಿದ ಬಳಿಕ ಬಾಲಕನು ನಾಲ್ಕು ದುಷ್ಕರ್ಮಿಗಳು ದರೋಡೆ ಮಾಡುವ ಉದ್ದೇಶದಿಂದ ಬಂದಿದ್ದು ಅಜ್ಜಿಯ ಕೋಣೆಗೆ ಬೆಂಕಿ ಹಚ್ಚಿದ್ದಾರೆ ಎಂದು ತನ್ನ ಹೆತ್ತವರ ಬಳಿ ಹೇಳಿದ್ದಾನೆ. ಹೆತ್ತವರು ಮನೆಗೆ ಬಂದ ಸಂದರ್ಭ ಬಾಲಕನ ಕೈ ಕಾಲುಗಳು ಬಟ್ಟೆಯಿಂದ ಕಟ್ಟಿರುವುದನ್ನು ಗಮನಿಸಿದ್ದಾರೆ. ಕೋಣೆಯ ಬಾಗಿಲಿಗೆ ಹೊರಗಿನಿಂದ ಬೀಗ ಹಾಕಲಾಗಿತ್ತು.
ಕುಟುಂಬಸ್ಥರು ಈ ಬಾಲಕ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು ಈ ಬಗ್ಗೆ ಬಾಲಕನ್ನು
ಪ್ರಶ್ನಿಸಿದಾಗ ಆತ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರವೀಂದರ್ ಪಾಲ್ ಸಿಂಗ್ ಸಂಧು ತಿಳಿಸಿದ್ದಾರೆ.
ಇನ್ನು ಬಾಲಕ ಕ್ರೈಮ್ ಧಾರಾವಾಹಿಗಳನ್ನು ನೋಡಿ ಎಲ್ಲವನ್ನೂ ಯೋಜನೆ ಮಾಡಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ.