ಲಕ್ನೋ, ಏ.14 (DaijiworldNews/MB) : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಅವರು ಸ್ವಯಂ ಪ್ರತ್ಯೇಕತೆಯಲ್ಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಈ ಬಗ್ಗೆ ಹಿಂದಿಯಲ್ಲಿ ಟ್ವೀಟ್ ಮಾಡಿರುವ ಅವರು, " ರೋಗಲಕ್ಷಣಗಳು ಇದ್ದ ಕಾರಣ ನಾನು ಕೊರೊನಾ ಪರೀಕ್ಷೆಗೆ ಒಳಗಾದೆ. ನನ್ನ ವರದಿಯು ಪಾಸಿಟಿವ್ ಆಗಿದೆ. ನಾನು ಸ್ವಯಂ ಪ್ರತ್ಯೇಕತೆಯಲ್ಲಿದ್ದೇನೆ. ವೈದ್ಯರ ಸೂಚನೆಯನ್ನು ಅನುಸರಿಸುತ್ತಿದ್ದೇನೆ. ನನ್ನ ಕರ್ತವ್ಯವನ್ನು ಆನ್ಲೈನ್ ಮೂಲಕ ನಿರ್ವಹಿಸುತ್ತೇನೆ" ಎಂದು ತಿಳಿಸಿದ್ದಾರೆ.
ಕಚೇರಿಯ ಕೆಲವು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಅವರು ಪ್ರತ್ಯೇಕತೆಯಲ್ಲಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ಅವರು, "ನನ್ನ ಕಚೇರಿಯಲ್ಲಿನ ಕೆಲವು ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಅಧಿಕಾರಿಗಳು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಆದ್ದರಿಂದ ನಾನು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕ ವಾಸದಲ್ಲಿದ್ದೇನೆ. ಎಲ್ಲಾ ಕಾರ್ಯಗಳನ್ನು ವರ್ಚುವಲ್ ಆಗಿ ನಿರ್ವಹಿಸುತ್ತಿದ್ದೇನೆ" ಎಂದು ತಿಳಿಸಿದ್ದರು.