ಬೆಂಗಳೂರು, ಏ.14 (DaijiworldNews/MB) : ಬಿಜೆಪಿ ಆಡಳಿತದಲ್ಲಿ ರಾಜ್ಯವು ಕೊರೊನಾ ನಿರ್ವಹಣೆಯಲ್ಲೂ ಗುಜರಾತ್ ಮಾಡೆಲ್ ಆಗುವುದರಲ್ಲಿ ಅನುಮಾನವಿಲ್ಲ ಎಂದು ಕಾಂಗ್ರೆಸ್ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದೆ.
ಬೆಂಗಳೂರಿನಲ್ಲಿ ಕೊರೊನಾ ಸೋಂಕಿತ ಮಹಿಳೆಗೆ ಆಸ್ಪತ್ರೆಯಲ್ಲಿ ಬೆಡ್ ಸಿಗದ ಕಾರಣ ಆಕೆ ಫುಟ್ಪಾತ್ನಲ್ಲೇ ಮಲಗಿರುವ ಬಗ್ಗೆ ಮಾಧ್ಯಮಗಳು ವರದಿ ಮಾಡಿದೆ. ಈ ವರದಿಯನ್ನು ಉಲ್ಲೇಖ ಮಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, ''ಶ್ರೀರಾಮುಲು, ಕೆ. ಸುಧಾಕರ್, ಬಿ ಎಸ್ ಯಡಯೂರಪ್ಪ ಅವರೇ, ಕೊರೊನಾ ಸೋಂಕು ದಿನದಿನಕ್ಕೂ ವಿಷಮ ಸ್ಥಿತಿ ನಿರ್ಮಿಸುತ್ತಿದೆ, ತಾವುಗಳಿನ್ನೂ ಮೈಮರೆತು ಕುಳಿತಿದ್ದೀರಿ. ಬೂಟಾಟಿಕೆಯ ಮಾತುಗಳನ್ನು ಬಿಟ್ಟು ಗಂಭೀರವಾಗಿ ಯೋಚನೆ, ಯೋಜನೆಗಳನ್ನು ಮಾಡದೇ ಹೋದಲ್ಲಿ ಪರಿಸ್ಥಿತಿ ಕೈಮೀರಿ ಹೋಗಲಿದೆ ಎಂದು ಎಚ್ಚರಿಸಿದ್ದು ಜನ ಹಾದಿ ಬೀದಿಗಳಲ್ಲಿ ಪ್ರಾಣಬಿಡುವ ಸ್ಥಿತಿ ನಿರ್ಮಿಸಬೇಡಿ'' ಎಂದು ಹೇಳಿದೆ.
''ರಾಜ್ಯದಲ್ಲಿ ಕೊರೊನಾ ಸೋಂಕು ನಿರ್ವಹಿಸುವಲ್ಲಿ ಬಿಜೆಪಿ ಸರ್ಕಾರದ ಧೋರಣೆ ನೋಡುತ್ತಿದ್ದರೆ 'ಗುಜರಾತ್ ಮಾಡೆಲ್'ನಂತೆ ಆಗುವುದರಲ್ಲಿ ಅನುಮಾನವಿಲ್ಲ ಎಂದು ಟೀಕಿಸಿರುವ ಕಾಂಗ್ರೆಸ್, ಬಿಎಸ್ವೈ ಅವರೇ ಪರಿಸ್ಥಿತಿ ಕೈಮೀರುವ ಮೊದಲು ತಜ್ಞರ ಹಾಗೂ ಸರ್ವಪಕ್ಷ ಸಭೆ ಕರೆದು ಕೂಡಲೇ ಕಾರ್ಯೋನ್ಮುಖರಾಗಿ. ತಡಮಾಡಿದರೆ ಮುಂದಿನ ಪರಿಣಾಮಗಳು ಭೀಕರವಾಗಿರಲಿದೆ'' ಎಂದು ಎಚ್ಚರಿಸಿದೆ.
''ಈಗಾಗಲೇ ಆಸ್ಪತ್ರೆಗಳು, ಬೆಡ್ಗಳು, ವೆಂಟಿಲೇಟರ್ಗಳು, ಐಸಿಯುಗಳು, ಎಲ್ಲವುಗಳ ಕೊರತೆ ಸೃಷ್ಟಿಯಾಗಿದೆ. ಜನ ಹಾದಿ ಬೀದಿಯಲ್ಲಿ ನರಳಿ ಸಾಯುತ್ತಿದ್ದಾರೆ. ನಿಮ್ಮ ಬೇಜವಾಬ್ದಾರಿ ಹೀಗೆಯೇ ಮುಂದುವರಿದಲ್ಲಿ ಸ್ಮಶಾನಗಳು ತುಂಬುತ್ತವೆ ಎಚ್ಚರ. ಎಲ್ಲಾ ಚಿಕಿತ್ಸಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಲು ಕೂಡಲೇ ಕೇಂದ್ರಕ್ಕೆ ಹಣಕಾಸು ನೆರವು ಕೇಳಿ'' ಎಂದು ಆಗ್ರಹಿಸಿದೆ.