ಡೆಹ್ರಾಡೂನ್, ಎ.14 (DaijiworldNews/PY): "ಕುಂಭಮೇಳದಲ್ಲಿ ಗಂಗಾಸ್ನಾನ ಮಾಡಿದರೆ ಕೊರೊನಾ ಬರುವುದಿಲ್ಲ" ಎಂದು ಉತ್ತರಾಖಂಡ ಸಿಎಂ ತೀರ್ಥ್ ಸಿಂಗ್ ರಾವತ್ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಕುಂಭ ಮೇಳ ಹಾಗೂ ನಿಜಾಮುದ್ದೀನ್ ಮರ್ಕಜ್ ಎರಡು ಧಾರ್ಮಿಕ ಕಾರ್ಯಕ್ರಮಗಳನ್ನು ಹೋಲಿಕೆ ಮಾಡಬೇಡಿ. ನಿಜಾಮುದ್ದೀನ್ ಮರ್ಕಜ್ ಕಾರ್ಯಕ್ರಮಕ್ಕೆ ವಿದೇಶಿಗರು ಬರುವ ಸಾಧ್ಯತೆ ಇದೆ" ಎಂದಿದ್ದಾರೆ.
"ಮರ್ಕಜ್ ನಡೆದ ಸಂದರ್ಭ ಕೊರೊನ ಬಗ್ಗೆ ಹೆಚ್ಚಿನ ಅರಿವು ಹಾಗೂ ಮಾರ್ಗಸೂಚಿ ಇರಲಿಲ್ಲ. ಇದರ ಜೊತೆ ಮರ್ಕಜ್ ಆಗಮಿಸುವವರು ಯಾರು, ಅವರು ಎಷ್ಟು ದಿನ ಉಳಿದುಕೊಳ್ಳಲಿದ್ದಾರೆ ಹಾಗೂ ಒಟ್ಟು ಜನಸಂಖ್ಯೆಯ ಬಗ್ಗೆ ಸರಿಯಾದ ಯೋಜನೆ ಇರಲಿಲ್ಲ. ಪ್ರಸ್ತುತ ಕೊರೊನಾ ಮಾರ್ಗಸೂಚಿಗಳನ್ನು ತೆಗೆದುಕೊಂಡು ಕುಂಭಮೇಳ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
"ಕುಂಭಮೇಳಕ್ಕೆ ಈಗಾಗಲೇ ಸಕಲ ಸಿದ್ದತೆಗಳು ನಡೆಯುತ್ತಿವೆ. ಕುಂಭಮೇಳವನ್ನು ಯಶಸ್ವಿಯಾಗಿ ನಡೆಸಲು ಕೊರೊನಾ ಸವಾಲು ಮುಂದಿದೆ. ಈ ಬಗ್ಗೆ ಹೆಚ್ಚಿನ ಗಮನಹರಿಸಿ ಜನರ ಆರೋಗ್ಯದ ದೃಷ್ಟಿಯಿಂದ ಸೂಕ್ತವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು" ಎಂದು ಹೇಳಿದ್ದಾರೆ.