ಬೆಂಗಳೂರು, ಎ.14 (DaijiworldNews/PY): ಆರನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಮುಂದುವರೆದಿದ್ದು, ಈ ನಡುವೆ ಮುಷ್ಕರಕ್ಕೆ ಬೆಂಬಲಿಸುವಂತೆ ಒಕ್ಕೂಟದಿಂದ ನಟ ಯಶ್ಗೆ ಪತ್ರ ಬರೆದಿದ್ದಾರೆ.
ಯಶ್ ಅವರ ತಂದೆ ಕೆಎಸ್ಆರ್ಟಿಸಿ ಸಿಬ್ಬಂದಿ ಆಗಿದ್ದ ಹಿನ್ನೆಲೆಯಲ್ಲಿ ಪತ್ರ ಬರೆಯಲಾಗಿದೆ.
ಪತ್ರದಲ್ಲಿ, "ಒಂದು ವಾರದಿಂದ ಕರ್ನಾಟಕದಲ್ಲಿ ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಸರ್ಕಾರದ ಹಠಮಾರಿ ಧೋರಣೆಯಿಂದ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಬೀದಿಗಿಳಿದು ಹೋರಾಟ ಮಾಡುತ್ತಿರುವ ವಿಚಾರ ನಿಮಗೆ ತಿಳಿಯದಾದುದೇನಲ್ಲ. ಹೀಗಿರುವಾಗ, ಸಾರಿಗೆ ನೌಕರ ಕುಟುಂಬದ ಹಿನ್ನೆಲೆ ಇರುವ, ಇಲ್ಲಿನ ನೌಕರರ ಪಾಡು-ಬದುಕು-ಬವಣೆಗಳ ಬಗ್ಗೆ ಚಾಲಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಘೋಷಿಸಿರುವ ಹಾಗೂ ನಮಗೆ ಹಿರಿಯ ಸಿಬ್ಬಂದಿಯೂ ಆಗಿದ್ದ ನಿಮ್ಮ ತಂದೆಯವರು ಅವರ ಅನುಭವವನ್ನು ನಿಮ್ಮ ಜೊತೆ ಹಂಚಿಕೊಂಡಿರಬಹುದು" ಎಂದು ತಿಳಿಸಿದ್ದಾರೆ.
"ಪ್ರಯತ್ನ-ಪರಿಶ್ರಮದ ಫಲವಾಗಿ ಚಲನಚಿತ್ರ ರಂಗದಲ್ಲಿ ರಾಕಿಂಗ್ ಸ್ಟಾರ್ ಆಗಿ ಜನಮಾನಸದಲ್ಲಿ ರಾರಾಜಿಸುತ್ತಿರುವ ತಾವು ಸಮಾಜ ಸೇವೆಯಲ್ಲಿಯೂ ಹಿಂದೆಬಿದ್ದಿಲ್ಲವೆಂಬುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಆದರೆ, ಈಗ ಸಾರಿಗೆ ನೌಕರರು ನಿರಂತರವಾಗಿ ತಮ್ಮ ಮೇಲಾಗುತ್ತಿರುವ ತಾರತಮ್ಯ, ದೌರ್ಜನ್ಯ-ದಬ್ಬಾಳಿಕೆಗಳಿಂದ ಬೇಸತ್ತು ಹೋರಾಟಕ್ಕೆ ಕುಟುಂಬ ಸಮೇತರಾಗಿ ಬೀದಿಗಿಳಿದಿದ್ದಾರೆ" ಎಂದು ಹೇಳಿದ್ದಾರೆ.
"ಹೃದಯಹೀನ ಸರ್ಕಾರ ತನ್ನ ಹಠಮಾರಿ ಧೋರಣೆಯಿಂದ ಸೇವೆ ಮಾಡುವ ಕೈಗಳನ್ನು ಭಿಕ್ಷೆ ಬೇಡುವಂತೆ ಮಾಡಿದೆ. ಇದೂ ನಿಮಗೂ ತಿಳಿದಿರಬಹುದು. ಕಾನೂನಿನ ಚೌಕಟ್ಟಿನಲ್ಲಿ ಮುಷ್ಕರದ ಮೊರೆಹೋಗಿರುವ ನಾವು ಇಂತಹ ಸಂಕಷ್ಟದ ಸಂದರ್ಭದಲ್ಲಿ ನಿಮ್ಮಿಂದ ಬೆಂಬಲ ನಿರೀಕ್ಷಿಸಬಹುದೇ?. ನಿಮ್ಮ ಏಳಿಗೆಯನ್ನು ಹೆಮ್ಮೆಯಿಂದ ಸಂಭ್ರಮಿಸುವ ನಾವು, ನಿಮ್ಮ ಬೆಂಬಲವು ನಮ್ಮ ಹೋರಾಟಕ್ಕೆ ಧನಾತ್ಮಕ ಪರಿಣಾಮ ಬೀರಬಹುದೆಂದು ನಂಬಿಕೆ ಹೊಂದಿದ್ದು ಹಾಗೂ ನಿಮ್ಮ ಬೆಂಬಲದ ನಿರೀಕ್ಷೆಯಲ್ಲಿ ಆಸೆಗಣ್ಣಿಂದ ಕಾಯುತ್ತಿರುತ್ತೇವೆ" ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.