ಬೆಂಗಳೂರು, ಏ.14 (DaijiworldNews/HR): ರಾಜ್ಯದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಬಿಟ್ಟು ಉಳಿದೆಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ. ಅಗತ್ಯಬಿದ್ದರೆ 2 ದಿನ ಕೊರೊನಾ ಕರ್ಫ್ಯೂ ಮುಂದುವರೆಸುತ್ತೇವೆ. ಅದರ ಹೊರತು ಪಡಿಸಿ ವೀಕೆಂಡ್ ಲಾಕ್ಡೌನ್ ಬಗ್ಗೆಯೂ ಯಾವುದೇ ಪ್ರಸ್ತಾಪ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಲಾಕ್ಡೌನ್ ಬಗ್ಗೆ ಸರ್ವಪಕ್ಷಗಳ ಸಭೆ ಬಳಿಕ ನಿರ್ಧಾರ ಮಾಡಿ, ಎಲ್ಲಾ ಪಕ್ಷಗಳವರ ಜೊತೆ ಚರ್ಚಿಸಿ ನಂತರ ನಿರ್ಣಯ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇನ್ನು "ನೈಟ್ಕರ್ಫ್ಯೂ ಕುರಿತು ತಜ್ಞರ ಜತೆ ಚರ್ಚೆ ಮಾಡಿದ ಬಳಿಕ ನಿರ್ಧರಿಸಲಾಗುವುದು. ಇನ್ನೊಂದೆರಡು ಜಿಲ್ಲೆಗಳಲ್ಲಿ ಕೊರೊನಾ ಕರ್ಫ್ಯೂ ವಿಸ್ತರಣೆಗೆ ಚಿಂತನೆ ನಡೆಸಲಾಗುತ್ತಿದೆ. ಇನ್ನುಳಿದಂತೆ ಲಾಕ್ಡೌನ್ ಬಗ್ಗೆ ಸರ್ವಪಕ್ಷ ಸಭೆ ಮುಗಿಯುವ ತನಕ ಯಾವುದೇ ನಿರ್ಧಾರ ಇಲ್ಲ. ಏಪ್ರಿಲ್ 18ರಂದು ಸರ್ವಪಕ್ಷ ಸಭೆ ಕರೆಯಲಾಗಿದೆ" ಎಂದರು.
ಕರ್ನಾಟಕದ ಸದ್ಯದ ಪರಿಸ್ಥಿತಿಯಲ್ಲಿ ಲಾಕ್ಡೌನ್ ಮಾಡುವುದಿಲ್ಲ, ಈ ಬಗ್ಗೆ ಉಹಾಪೋಹದ ಸುದ್ದಿ ಹರಡಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುಳ್ಳು ಸುದ್ದಿ ಹಬ್ಬಿಸುವವರಿಗೆ ಎಚ್ಚರಿಕೆ ನೀಡಿದ್ದಾರೆ.