ನವದೆಹಲಿ, ಏ.14 (DaijiworldNews/HR): "ದೇಶದಲ್ಲಿ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳು ದಿನೇ ದಿನೇ ಏರಿಕೆಯಾಗುತ್ತಿದ್ದು, ಆ ಬಗ್ಗೆ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಲಾಕ್ಡೌನ್ ಮಾಡುವ ಆಲೋಚನೆಯಲ್ಲಿಲ್ಲ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿಯೂ ನಾವು ಒಂದು ವಿಷಯದ ಬಗ್ಗೆ ಸ್ಪಷ್ಟವಾಗಿದ್ದು, ದೊಡ್ಡ ಮಟ್ಟದಲ್ಲಿ ಲಾಕ್ಡೌನ್ ಹೇರುವುದಿಲ್ಲ. ದೇಶದ ಆರ್ಥಿಕತೆ ಮೇಲೆ ಸೋಂಕು ಪರಿಣಾಮ ಬೀರಲು ಬಿಡುವುದಿಲ್ಲ. ರೋಗಿಗಳನ್ನು ಐಸೊಲೇಷನ್ನಲ್ಲಿಡುವುದು ಹಾಗೂ ಲಸಿಕೆ ಮೂಲಕವೇ ಕೊರೊನಾ ನಿಯಂತ್ರಣಕ್ಕೆ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಲಾಕ್ ಡೌನ್ ಮಾಡುವುದಿಲ್ಲ" ಎಂದಿದ್ದಾರೆ.
ಇನ್ನು "ಸರ್ಕಾರಕ್ಕೆ ಲಾಕ್ಡೌನ್ ಮಾಡುವ ಚಿಂತನೆಯಿಲ್ಲ. ಸೋಂಕಿನ ಪ್ರಕರಣಗಳು ಹೆಚ್ಚಿರುವ ಕಡೆಯಲ್ಲಿ ಸ್ಥಳೀಯವಾಗಿ ಕಂಟೇನ್ಮೆಂಟ್ ಝೋನ್ಗಳನ್ನು ನಿರ್ಮಾಣ ಮಾಡಬಹುದಷ್ಟೆ" ಎಂದು ಹೇಳಿದ್ದಾರೆ.
ಭಾರತದಲ್ಲಿ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಒಂದೂವರೆ ಲಕ್ಷದ ಗಡಿ ದಾಟಿಟ್ಟು, ಸೋಮವಾರ 1,61,736 ಹೊಸ ಪ್ರಕರಣಗಳು ದೇಶದಲ್ಲಿ ದಾಖಲಾಗಿವೆ.