ಡೆಹ್ರಾಡೂನ್, ಏ.14 (DaijiworldNews/MB) : ದೇಶದಲ್ಲಿ ಕೊರೊನಾ ಏರಿಕೆ ನಡುವೆ ನಡೆದ ಹರಿದ್ವಾರದ 'ಕುಂಭ ಮೇಳ' ಚರ್ಚೆಗೆ ಗ್ರಾಸವಾಗಿದ್ದು ಕಳೆದ ವರ್ಷದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಪ್ರಕರಣಕ್ಕೆ ಹೋಲಿಕೆ ಮಾಡಲಾಗಿದೆ. ಇದಕ್ಕೆ ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ''ಕುಂಭ ಮೇಳ ಮತ್ತು ನಿಜಾಮುದ್ದೀನ್ ಮರ್ಕಜ್ ನಡುವೆ ಹೋಲಿಕೆ ಮಾಡುವುದು ಸರಿಯಲ್ಲ'' ಎಂದು ಹೇಳಿದ್ದಾರೆ.
ಸೋಮವಾರ ನಡೆದ ಎರಡನೇ ಶಾಹಿ ಸ್ನಾನದಲ್ಲಿ ಸುಮಾರು 35 ಲಕ್ಷ ಜನರು ಭಾಗವಹಿಸಿದ್ದು ಈ ವೇಳೆ ಪರಸ್ಪರ ಅಂತರ ಕಾಯ್ದುಕೊಳ್ಳುವುದು ಅಸಾಧ್ಯವಾಗಿತ್ತು. ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಕಳೆದ ವರ್ಷ ನಿಷೇದಾಜ್ಞೆಯ ನಡುವೆಯೂ ನೂರಾರು ಮಂದಿ ಮರ್ಕಜ್ನಲ್ಲಿ ಸೇರಿದ್ದು ತಬ್ಲಿಗಿ ಜಮಾತ್ನ ಹಲವು ಸದಸ್ಯರಿಗೆ ಕೊರೊನಾ ದೃಢಪಟ್ಟಿತ್ತು. ಕೆಲವರು ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದಿದ್ದ ಧಾರ್ಮಿಕ ಸಭೆಗೆ ಕುಂಭಮೇಳವನ್ನು ಹೋಲಿಸಿ ವಿಶ್ಲೇಷಣೆ ಮಾಡಿದ್ದರು.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ತೀರಥ್ ಸಿಂಗ್ ರಾವತ್, ''ಕುಂಭ ಮೇಳ, ನಿಜಾಮುದ್ದೀನ್ ಮರ್ಕಜ್ ನಡುವೆ ಹೋಲಿಕೆ ಸರಿಯಲ್ಲ. ಮರ್ಕಜ್ ಒಳಾಂಗಣದಲ್ಲಿ ಕಾರ್ಯಕ್ರಮ ನಡೆದಿದ್ದು ಕುಂಭ ಮೇಳವು ಹೊರಗಡೆ, ಗಂಗಾ ನದಿಯ ಘಾಟ್ಗಳಲ್ಲಿ ನಡೆಯುತ್ತಿದೆ. ಅಷ್ಟಕ್ಕೂ ಕುಂಭ ಮೇಳದಲ್ಲಿ ಹೊರಗಿನವರು ಭಾಗಿಯಾಗುತ್ತಿಲ್ಲ, ಎಲ್ಲರೂ ನಮ್ಮ ಜನರೇ. ಆದರೆ ಮರ್ಕಜ್ ಸಭೆ ನಡೆದಾಗ ಯಾರಿಗೂ ಕೊರೊನಾವಾಗಲಿ ಅದರ ಮಾರ್ಗಸೂಚಿಯ ಬಗ್ಗೆಯಾಗಲಿ ಮಾಹಿತಿ ಇರಲಿಲ್ಲ. ಆದರೆ ಈಗ ಸಾಕಷ್ಟು ಜಾಗೃತಿಯಿದೆ. ಅಷ್ಟಕ್ಕೂ ಕುಂಭ ಮೇಳ 12 ವರ್ಷಕ್ಕೆ ಒಮ್ಮೆ ಮಾತ್ರ ನಡೆಯುತ್ತದೆ. ಇದು ಲಕ್ಷಾಂತರ ಜನರ ನಂಬಿಕೆ'' ಎಂದು ಹೇಳಿದ್ದಾರೆ.
''ಹರಿದ್ವಾರ ಪ್ರವೇಶಕ್ಕೂ ಮುನ್ನ ಗಡಿಭಾಗಗಳಲ್ಲಿ ಜನರ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಕೊರೊನಾ ಪರೀಕ್ಷೆಯನ್ನೂ ಮಾಡಲಾಗುತ್ತಿದೆ. ಇನ್ನು ಮೇಳದ ಸಂದರ್ಭ ಮಾಸ್ಕ್ಗಳು ಹಾಗೂ ಸ್ಯಾನಿಟೈಸರ್ ನೀಡಲಾಗಿದೆ'' ಎಂದು ಮಾಹಿತಿ ನೀಡಿದರು.
ಇನ್ನು ಉತ್ತರಾಖಂಡದಲ್ಲಿ ಮಂಗಳವಾರ 24 ಗಂಟೆಗಳ ಅಂತರದಲ್ಲಿ 1,925 ಹೊಸ ಪ್ರಕರಣಗಳು ದಾಖಲಾಗಿವೆ. ಈವರೆಗೆ ವರದಿಯಾದ ದಿನದ ಪ್ರಕರಣಗಳಲ್ಲಿ ಇದು ಅತೀ ಹೆಚ್ಚಿನದ್ದಾಗಿದೆ.