ನವದೆಹಲಿ, ಎ.14 (DaijiworldNews/PY): ದೇಶಾದ್ಯಂತ ಎಪ್ರಿಲ್ 14ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಸಂದರ್ಭ ಅಂಬೇಡ್ಕರ್ ಅವರ ಜೀವನ, ಸಾಧನೆಗಳನ್ನು ಗಣ್ಯರು ಸ್ಮರಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಹಿಂದುಳೀದ ವರ್ಗದವರನ್ನು ಮುಖ್ಯವಾಹಿನಿಗೆ ತರಲು ಹೋರಾಟ ನಡೆಸಿದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸ್ಮರಣೀಯರು. ಅವರ ಹೋರಾಟ ಪ್ರತೀ ಪೀಳಿಗೆಗೆ ಒಂದು ಉದಾಹರಣೆಯಾಗಿದೆ" ಎಂದಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಟ್ವೀಟ್ ಮಾಡಿದ್ದು, "ಭಾರತೀಯ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಭೀಮರಾವ್ ಅಂಬೇಡ್ಕರ್ ಅವರ ಜನ್ಮದಿನದಂದು ಅವರಿಗೆ ಶ್ರದ್ದಾಂಜಲಿ. ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ನ್ಯಾಯಯುತವಾದ ಸಮಾಜವನ್ನು ರಚಿಸಲು ಹೋರಾಡಿದರು. ಇಂದು, ಅವರ ಜೀವನ ಹಾಗೂ ಆಲೋಚನೆಗಳಿಂದ ಕಲಿಯುವ ಮೂಲಕ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳು ಸಂಕಲ್ಪ ಮಾಡುತ್ತೇವೆ" ಎಂದಿದ್ದಾರೆ.
"ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ಅವರಿಗೆ ಶ್ರದ್ಧಾಪೂರ್ವಕ ಪ್ರಣಾಮಗಳು. ಸಮಾಜದಲ್ಲಿ ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆಗಳನ್ನು ಪ್ರತಿಪಾದಿಸುವ ಜೊತೆಗೆ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದ ಡಾ.ಅಂಬೇಡ್ಕರ್ ಅವರ ಸಾಧನೆ, ದೇಶ ನಿರ್ಮಾಣದಲ್ಲಿ ಅವರ ಕೊಡುಗೆ ಚರಿತ್ರಾರ್ಹವಾಗಿದೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಟ್ವೀಟ್ ಮಾಡಿದ್ದಾರೆ.
"ದೇಶವನ್ನು ಆಳುವ ದೊರೆ ರಾಣಿಯ ಗರ್ಭದಲ್ಲಿ ಜನಿಸುವುದಿಲ್ಲ, ಬದಲಾಗಿ ಪ್ರಜೆಗಳು ಆರಿಸುವ ಮತಗಟ್ಟೆಯಲ್ಲಿ ಹುಟ್ಟುತ್ತಾನೆ. ಸಂವಿಧಾನಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಜನ್ಮದಿನದ ಸ್ಮರಣೆಗಳು" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮಾಡಿದ್ದಾರೆ.
"ಬಾಬಾ ಸಾಹೇಬರ ಹುಟ್ಟು ನಮ್ಮೆಲ್ಲರ ಹುಟ್ಟನ್ನು ಅರ್ಥಪೂರ್ಣಗೊಳಿಸಿತು. ನಮಗೆ ಸ್ವಾಭಿಮಾನ, ಸ್ವಾವಲಂಬನೆ ಮತ್ತು ಘನತೆಯ ಬದುಕು ಸಿಕ್ತು. ಬಾಬಾಸಾಹೇಬರ ಹುಟ್ಟುಹಬ್ಬವನ್ನು ಅವರ ಚಿಂತನೆಯ ಅರಿವಿನೊಂದಿಗೆ ನಮ್ಮೆಲ್ಲರ ಹುಟ್ಟುಹಬ್ಬವಾಗಿ ಆಚರಿಸೋಣ. ಅಂಬೇಡ್ಕರ್ ಜಯಂತಿಯ ಶುಭಾಶಯಗಳು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.