ಲಕ್ನೋ, ಎ.14 (DaijiworldNews/PY): ಕಚೇರಿಯ ಕೆಲವು ಸಿಬ್ಬಂದಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತ್ಯೇಕ ವಾಸದಲ್ಲಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನನ್ನ ಕಚೇರಿಯಲ್ಲಿನ ಕೆಲವು ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಅಧಿಕಾರಿಗಳು ನನ್ನೊಂದಿಗೆ ಸಂಪರ್ಕದಲ್ಲಿದ್ದರು. ಆದ್ದರಿಂದ ನಾನು ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕ ವಾಸದಲ್ಲಿದ್ದೇನೆ. ಎಲ್ಲಾ ಕಾರ್ಯಗಳನ್ನು ವರ್ಚುವಲ್ ಆಗಿ ನಿರ್ವಹಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ವಿಶೇಷ ಕರ್ತವ್ಯದಲ್ಲಿರುವ ಅಧಿಕಾರಿ ಅಭಿಷೇಕ್ ಕೌಶಿಕ್ ಸೇರಿದಂತೆ ಕೆಲ ಅಧಿಕಾರಿಗಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಆದರೆ, ಸೋಂಕು ತಗುಲಿದ ಅಧಿಕಾರಿಗಳ ಹೆಸರನ್ನು ಸಿಎಂ ಯೋಗಿ ಆದಿತ್ಯನಾಥ್ ಅವರು ಬಹಿರಂಗಪಡಿಸಿಲ್ಲ.