ಕೊಲ್ಕತ್ತಾ, ಏ.14 (DaijiworldNews/MB) : ಚುನಾವಣಾ ಆಯೋಗ ತನ್ನ ಮೇಲೆ ಹೇರಿದ್ದ 24 ಗಂಟೆ ಕಾಲ ಪ್ರಚಾರ ನಿಷೇಧ ಸಮಯಾವಧಿ ಮುಗಿಯುತ್ತಿದ್ದಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬರಾಸತ್ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ''ನಾನೊಬ್ಬಳು ಬೀದಿ ಹೋರಾಟಗಾರ್ತಿ, ಯುದ್ದಭೂಮಿಯಲ್ಲಿ ಹೋರಾಡುತ್ತೀನಿ'' ಎಂದು ಹೇಳಿದ್ದಾರೆ.
''ಬಿಜೆಪಿಯವರ ಬಳಿ ಕೋಟ್ಯಂತರ ರೂ. ಹಣವಿದೆ, ಮಧ್ಯವರ್ತಿ, ಹೋಟೆಲ್ಗಳಿವೆ. ಅಷ್ಟೇ ಅಲ್ಲದೆ ದೇಶದ ಎಲ್ಲಾ ಏಜೆನ್ಸಿಗಳು ನಿಮ್ಮ ಬಳಿಯೇ ಇದೆ. ಆದರೆ ಈಗಲೂ ನೀವು ಸೋಲುತ್ತೀರಿ ಯಾಕೆಂದು ನಿಮಗೆ ತಿಳಿದಿದೆಯೇ?'' ಎಂದು ಬಿಜೆಪಿಗರನ್ನು ಪ್ರಶ್ನಿಸಿದ ಮಮತಾ, ''ಯಾಕೆಂದರೆ ನಾನೊಬ್ಬಳು ಬೀದಿ ಹೋರಾಟಗಾರ್ತಿ, ಯುದ್ದಭೂಮಿಯಲ್ಲಿ ಹೋರಾಡುತ್ತೀನಿ'' ಎಂದು ಗುಡುಗಿದ್ದಾರೆ.
''ಹಾಗೆಯೇ ನಾನು ಮೇಲಿನಿಂದ ಬರುವ ಸೂಚನೆಗೆ ಅನುಸಾರವಾಗಿ ಹೋರಾಟ ನಡೆಸುವವಳಲ್ಲ'' ಎಂದೂ ಹೇಳಿರುವ ದೀದಿ, ''ಬಿಜೆಪಿಯು ಎಲ್ಲಾ ಕೇಂದ್ರಿಯ ಸಂಸ್ಥೆಗಳು ಮತ್ತು ಏಜೆನ್ಸಿಗಳ ನೆರವಿನಿಂದ ನನ್ನನ್ನು ಯಾಕೆ ತಡೆಯಲು ಯತ್ನಿಸುತ್ತಿದೆ'' ಎಂದು ಪ್ರಶ್ನಿಸಿದರು.
''ಬಿಜೆಪಿಯು ನನ್ನನ್ನು ತಡೆಗಟ್ಟಲು ಎಲ್ಲಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ. ಆದರೆ ನನ್ನನ್ನು ತಡೆಯುವುದರಿಂದ ಯಾವುದೇ ಲಾಭವಿಲ್ಲ. ನಾನು ಕೂಡಾ ದಾಳಿ ಮಾಡಬಹುದು. ನಾನು ಬಂಗಾಳವನ್ನು ಗುಜರಾತ್ ಆಗಲು ಬಿಡುವವಲಲ್ಲ'' ಎಂದು ಬಿಜೆಪಿ ವಿರುದ್ದ ಹೌಹಾರಿದರು.
ಇನ್ನು ತಾನು 24 ಗಂಟೆ ಕಾಲ ಪ್ರಚಾರ ನಡೆಸುವುದಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ ಅವರು ಇದು 'ಅಸಾಂವಿಧಾನಿಕ' ಎಂದು ಹೇಳಿ ಕೋಲ್ಕತ್ತದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಮಂಗಳವಾರ ಧರಣಿ ನಡೆಸಿದ್ದಾರೆ.