ಕೋಲ್ಕತ್ತ,ಏ.13 (DaijiworldNews/HR): ಪ್ರಧಾನಿ ನರೇಂದ್ರ ಮೋದಿಯವನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪದೇ ಪದೇ 'ಹೊರಗಿನವರು' ಎಂದು ಆರೋಪಿಸುತ್ತಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಬಂಗಾಳ ಮುಖ್ಯಮಂತ್ರಿಗೆ ಜ್ಞಾನದ ಕೊರತೆಯಿದೆ" ಎಂದು ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಶಾ, "ದೀದಿಯವರೇ, ಹೊರಗಿನವರು ಯಾರು ಎಂದು ನಾನು ನಿಮಗೆ ವಿವರಿಸುತ್ತೇನೆ. ಕಮ್ಯುನಿಸ್ಟರು ರಷ್ಯಾ ಹಾಗೂ ಚೀನಾದ ಸಿದ್ಧಾಂತಗಳನ್ನು ಆಮದು ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕತ್ವವೇ ಹೊರಗಿನವರಾಗಿದ್ದಾರೆ. ಅದು ಇಟಲಿಯಿಂದ ಬಂದಿವೆ. ಮತ್ತೆ ತೃಣಮೂಲ ಕಾಂಗ್ರೆಸ್ - ಅವರ ವೋಟ್ ಬ್ಯಾಂಕ್ ಅಕ್ರಮ ವಲಸಿಗರಾಗಿದ್ದಾರೆ" ಎಂದರು.
"ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನಾಯಕತ್ವವು ಹೊರಗಿನವರು ಎಂದು ಬ್ಯಾನರ್ಜಿ ಪ್ರತಿದಿನ ಆರೋಪಿಸುತ್ತಾರೆ. ಆದರೆ ರಾಜ್ಯದ ಜನರನ್ನು ದೀರ್ಘಕಾಲ ಮೋಸಗೊಳಿಸಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದ ಮುಂದಿನ ಮುಖ್ಯಮಂತ್ರಿ ಈ ಮಣ್ಣಿನ ಮಗ" ಎಂದಿದ್ದಾರೆ.
ಇನ್ನು ಏಪ್ರಿಲ್ 10ರಂದು ನಾಲ್ಕನೇ ಹಂತದ ಮತದಾನದ ವೇಳೆ ಕೂಚ್ ಬಿಹಾರ್ನ ಸಿತಾಲಕುಚಿಯಲ್ಲಿ ಭದ್ರತಾಪಡೆಯ ಗುಂಡೇಟಿಗೆ ಟಿಎಂಸಿಯ ನಾಲ್ವರು ಮೃತಪಟ್ಟಿದ್ದು, ಬಳಿಕ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ದೀದಿ ಪಟ್ಟು ಹಿಡಿದಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಈ ಚುನಾವಣೆಯು ನನ್ನ ರಾಜೀನಾಮೆಯ ವಿಷಯವಲ್ಲ. ಬದಲಾಗಿ ಮೇ 2ರಂದು ಮಮತಾ ರಾಜೀನಾಮೆ ಸಲ್ಲಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.