ಬೆಳಗಾವಿ, ಏ.13 (DaijiworldNews/HR): ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕೆಲವು ಕಡೆಗಳಲ್ಲಿ ತಟ್ಟೆ-ಲೋಟ ಬಡಿದು ಪ್ರತಿಭಟನೆ ನಡೆಸಿದ್ದರೆ, ಇನ್ನು ಕೆಲವೆಡೆ ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಲಾಗುತ್ತಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಹೈಡ್ರಾಮಾವೊಂದು ನಡೆದಿದ್ದು, ಸಾರಿಗೆ ನೌಕರರು ಕುಟುಂಬ ಸಮೇತರಾಗಿ ಭಿಕ್ಷೆ ಬೇಡಿ ವಿಭಿನ್ನವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕೆಎಸ್ಆರ್ಟಿಸಿ ಬಸ್ ಚಾಲಕನೊಬ್ಬ ಮುಷ್ಕರದಲ್ಲಿ ಭಾಗಿಯಾಗದೇ ಬಸ್ ಓಡಿಸಿದ್ದು, ಇದನ್ನು ಗಮನಿಸಿದ ಪ್ರತಿಭಟನಾ ನಿರತ ಮಹಿಳೆಯರು ಬಸ್ ಅಡ್ಡಗಟ್ಟಿ ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇನ್ನು ಬಸ್ ಹತ್ತಿದ ಮಹಿಳೆಯರು ಚಾಲಕನಿಗೆ ಹೂವಿನ ಹಾರ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದು, ಇದೇ ವೇಳೆ ಮಹಿಳೆಯೊಬ್ಬರು ರೊಚ್ಚಿಗೆದ್ದು ಮಾಂಗಲ್ಯ ಸರವನ್ನೇ ಹಾಕಲು ಮುಂದಾಗಿದ್ದಾರೆ ಎನ್ನಲಾಗಿದೆ.
ನಾವು ಮಕ್ಕಳೊಂದಿಗೆ ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದರೆ ನೀನು ಬಸ್ ಓಡಿಸಿ ಸರ್ಕಾರದ ಕ್ರಮವನ್ನು ಬೆಂಬಲಿಸಲು ಮುಂದಾಗಿದ್ದೀಯಾ. ಬಸ್ ಓಡಿಸುವುದಾದರೆ ತಾಳಿ ಹಾಕಿಕೊಂಡು ಓಡಿಸು ಎಂದು ಮಹಿಳೆ ವಾಗ್ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.