ಬೆಂಗಳೂರು, ಎ.13 (DaijiworldNews/PY): "ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್ನಂತೆ! ಹಣದಿಂದ ಶಾಸಕರನ್ನೂ ಖರೀದಿಸುತ್ತದೆ, ಮತಗಳನ್ನೂ ಖರೀದಿಸುತ್ತದೆ" ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿಗೆ ಪ್ರಜಾಪ್ರಭುತ್ವವೆಂದರೆ ಶಾಪಿಂಗ್ ಮಾಲ್ನಂತೆ! ಹಣದಿಂದ ಶಾಸಕರನ್ನೂ ಖರೀದಿಸುತ್ತದೆ, ಮತಗಳನ್ನೂ ಖರೀದಿಸುತ್ತದೆ. ಮಸ್ಕಿ ಕ್ಷೇತ್ರದ ಮತದಾರರಿಗೆ ನಂದೀಶ್ ರೆಡ್ಡಿ ಹಣ ಹಂಚಿದ ವಿಡಿಯೋ ಇದು. ಚುನಾವಣೆಯಲ್ಲಿ ಬಿಜೆಪಿ ಹಣದ ಹೊಳೆ ಹರಿಸಿದ್ದು ಜಗತ್ತಿಗೆ ತಿಳಿದರೂ ಕರ್ನಾಟಕದ ಮುಖ್ಯ ಚುನಾವಣಾ ಅಧಿಕಾರಿ ಕಣ್ಣಿಗೆ ಕಾಣಲಿಲ್ಲವೇ? ಕಂಡರೂ ಜಾಣ ಕುರುಡೇ?" ಎಂದು ಪ್ರಶ್ನಿಸಿದೆ.
"ಬಸನಗೌಡ ಪಾಟೀಲ ಯತ್ನಾಳ ಅವರ ಈ ಆರೋಪಕ್ಕೆ ಪುಷ್ಠಿ ಕೊಡುವಂತೆ ಉಪ ಚುನಾವಣಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರದ ಹಣ ಹೊಳೆಯನ್ನೇ ಹರಿಸುತ್ತಿದೆ ಬಿಜೆಪಿ ಐಟಿ, ಇಡಿ ಸಂಸ್ಥೆಗಳು ಏನು ಮಾಡುತ್ತಿವೆ? ಈ ಹಣ ಎಲ್ಲಿಂದ ಬಂತು? ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿರುವುದೇಕೆ? ಆಡಳಿತ ಪಕ್ಷದ ಶಾಸಕರ ಈ ಆರೋಪ ಗಂಭೀರ ಎನಿಸಲಿಲ್ಲವೇ?" ಎಂದು ಕೇಳಿದೆ.
"ಬಿಜೆಪಿ ಜಗತ್ತೇ ನಿಮ್ಮ ಬೃಹನ್ನಾಟಕ ನೋಡುತ್ತಿದೆ, ಆದರೂ ಬೇರೆ ಕಡೆ ಬೆರಳು ತೋರಿಸುವ ನಿಮ್ಮ ಲಜ್ಜೆಗೇಡಿತನಕ್ಕೆ ಏನೆನ್ನಬೇಕು! ಒಬ್ಬ ಯತ್ನಾಳ್ರನ್ನ ಮತ್ತೊಬ್ಬ ಈಶ್ವರಪ್ಪನವರನ್ನ ಸಂಬಾಳಿಸಲಾಗದ ನಿಮ್ಮ ಹಡಗು ಅರ್ಧ ಮುಳುಗಿದೆ, ಉಪಚುನಾವಣೆ ಬಳಿಕ ಪೂರ್ತಿ ಮುಳುಗಲಿದೆ ಕಳೆದ ಬಾರಿಯೇ ರಾಜ್ಯ ಕಂಡಿಲ್ಲವೇ ನಿಮ್ಮ ಘನಂದಾರಿ ಆಡಳಿತವನ್ನು" ಎಂದು ವ್ಯಂಗ್ಯವಾಡಿದೆ.