ಬೆಂಗಳೂರು, ಎ.13 (DaijiworldNews/PY): "ಸರ್ಕಾರ ತನ್ನ ಪ್ರತಿಷ್ಠೆ ಬಿಟ್ಟು, ಸಾರಿಗೆ ನೌಕರರನ್ನು ಕರೆದು ಮತುಕತೆ ನಡೆಸಬೇಕು. ನೌಕರರು ಮುಷ್ಕರ ಮಾಡಿದಾಗ ಕಾರಣ ಕೇಳಿ ಸಮಸ್ಯೆಯನ್ನು ಬಗೆಹರಿಸಬೇಕು. ಬದಲಾಗಿ ಹಠಕ್ಕೆ ಬೀಳಬಾರದು" ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಚಾರದ ಸಂದರ್ಭ ಜನರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಬಿಜೆಪಿ ಪರ ಜನಾಭಿಪ್ರಾಯ ಇಲ್ಲ. ಮೂರು ಕ್ಷೇತ್ರಗಳಲ್ಲೂ ಕೂಡಾ ನಾವೇ ವಿಜಯ ಸಾಧಿಸುತ್ತೇವೆ" ಎಂದು ತಿಳಿಸಿದ್ದಾರೆ.
"ಸರ್ಕಾರ ತನ್ನ ಪ್ರತಿಷ್ಠೆ ಬಿಟ್ಟು, ಸಾರಿಗೆ ನೌಕರರನ್ನು ಕರೆದು ಮತುಕತೆ ನಡೆಸಬೇಕು. ನೌಕರರು ಮುಷ್ಕರ ಮಾಡಿದಾಗ ಕಾರಣ ಕೇಳಿ ಸಮಸ್ಯೆಯನ್ನು ಬಗೆಹರಿಸಬೇಕು. ಬದಲಾಗಿ ಹಠಕ್ಕೆ ಬೀಳಬಾರದು. ಸಾರಿಗೆ ನೌಕರರೊಂದಿಗೆ ಕೂತು ಚರ್ಚೆ ಮಾಡಿ, ಅವರ ಸಾಧಕ ಬಾಧಕಗಳ ಬಗ್ಗೆ ತಿಳಿದುಕೊಳ್ಳಬೇಕು. ಅವರನ್ನು ಹೆದರಿಸಿ, ಬೆದರಿಸಿ ಮುಷ್ಕರವನ್ನು ಹತ್ತಿಕ್ಕುವ ಪ್ರಯತ್ನ ಮಾಡಬಾರದು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ನನಗೆ ಕೊರೊನಾ ಸರ್ವಪಕ್ಷ ಬಗ್ಗೆ ನೋಟಿಸ್ ಬಂದಿಲ್ಲ. ನೋಟಿಸ್ ಬಂದ ಬಳಿಕ ನಾನು ಯೋಚನೆ ಮಾಡುತ್ತೇನೆ. ಕೊರೊನಾ ಸೋಂಕು ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಹೊರಗಿನಿಂದ ಬಂದವರನ್ನು ಸರಿಯಾಗಿ ಪರೀಕ್ಷೆ ಮಾಡುವುದನ್ನು ನಿಲ್ಲಿಸಿಬಿಟ್ಟರು. ಸಭೆ-ಸಮಾರಂಭ, ಜಾತ್ರೆಗಳನ್ನು ಸರಿಯಾಗಿ ನಿಯಂತ್ರಿಸಲಿಲ್ಲ. ಚುನಾವಣಾ ಪ್ರಚಾರ ಕೈಗೊಂಡರು. ಅದನ್ನು ನಿಯಂತ್ರಿಸಬೇಕಿತ್ತು. ಅವರು ಮಾಡಿದ ರೀತಿ ನಾವು ಮಾಡುತ್ತಿದ್ದೇವೆ" ಎಂದಿದ್ದಾರೆ.
"ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಸರ್ಕಾರವೇ ಹೊಣೆ. ಲಾಕ್ಡೌನ್ ವಿಚಾರದ ಬಗ್ಗೆ ಸರ್ವಪಕ್ಷಸಭೆಯಲ್ಲಿ ಏನು ಹೇಳಬೇಕೋ ಅದನ್ನು ಹೇಳುತ್ತೇನೆ" ಎಂದು ಹೇಳಿದ್ದಾರೆ.