ಬಸವಕಲ್ಯಾಣ, ಏ.13 (DaijiworldNews/HR): "ಬಿಜೆಪಿ ಮೇಲ್ಜಾತಿ, ಸಿರಿವಂತರ ಪರವಾಗಿ, ಬಡವರ ವಿರೋಧಿಯಾಗಿದ್ದು, ಬಿಜೆಪಿಯ ಸಬ್ ಕಾ ಸಾಥ್ನಲ್ಲಿ ಮುಸ್ಲಿಂ, ಕ್ರೈಸ್ತರು, ದಲಿತರಿದ್ದಾರಾ. ನೀವೆಲ್ಲ ಸ್ವಾಭಿಮಾನಿಯಾಗಿದ್ರೆ ಚುನಾವಣೆಯಲ್ಲಿ ಸೋಲಿಸಿ ಪಾಠ ಕಲಿಸಿ" ಎಂದು ವಿರೋಧ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾದಿದ ಅವರು, "ಬಡವರಿಗಾಗಿ ಕಾಂಗ್ರೆಸ್ ಅಧಿಕಾರವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳನ್ನು ಬಿಜೆಪಿ ಸರ್ಕಾರ ನಿಲ್ಲಿಸಿದ್ದು, ಅಲ್ಪಸಂಖ್ಯಾತರು, ಹಿಂದುಳಿದ ಹಾಗೂ ದಲಿತರ ಏಳ್ಗೆಯನ್ನು ಸಹಿಸದ ಪಕ್ಷ ಬಿಜೆಪಿಯಾಗಿದೆ" ಎಂದರು.
ಇನ್ನು "ದೇಶದ ಶೇ.65ರಷ್ಟು ಜನ ಗ್ರಾಮೀಣರನ್ನು ಬಿಜೆಪಿ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದ್ದು, ದೆಹಲಿಯಲ್ಲಿ ಲಕ್ಷಾಂತರ ಗ್ರಾಮೀಣ ರೈತರು ಧರಣಿ ನಡೆಸುತ್ತಿದ್ದರೂ ನಿರ್ಲಕ್ಷ್ಯ ವಹಿಸಿದೆ. ಪ್ರಧಾನಿ ಮೋದಿ ಧರಣಿ ನಿರತರನ್ನು ಮಾತನಾಡಿಸಿಯೂ ಇಲ್ಲ" ಎಂದು ಆರೋಪಿಸಿದ್ದಾರೆ.
"ಕಳೆದ 6 ದಿನಗಳಿಂದ ಸಾರಿಗೆ ನೌಕರರು ಪ್ರತಿಭಟನೆ ನಡೆಸುತ್ತಿದ್ದರೂ ಕೇಳುತ್ತಿಲ್ಲ. ಎಸ್ಮಾ ಜಾರಿ, ವರ್ಗಾವಣೆ, ವಜಾದ ಬೆದರಿಕೆಯೊಡ್ಡಿ ನೌಕರರನ್ನು ಅತಂತ್ರಗೊಳಿಸುವ ತಂತ್ರ ಸರಿಯಲ್ಲ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಯಡಿಯೂರಪ್ಪ ಅರಿತುಕೊಳ್ಳಬೇಕು" ಎಂದು ಹೇಳಿದ್ದಾರೆ.