ಕೋಲ್ಕತ್ತ, ಏ.13 (DaijiworldNews/MB) : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ 24 ಗಂಟೆ ಕಾಲ ಪ್ರಚಾರ ನಡೆಸುವುದಕ್ಕೆ ಚುನಾವಣಾ ಆಯೋಗ ನಿಷೇಧ ಹೇರಿದ್ದು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಮಮತಾ ಬ್ಯಾನರ್ಜಿ ಅವರು ಇದು 'ಅಸಾಂವಿಧಾನಿಕ' ಎಂದು ಹೇಳಿ ಕೋಲ್ಕತ್ತದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದ್ದಾರೆ.
ವೀಲ್ಚೇರ್ನಲ್ಲಿಯೇ ಬೆಳಗ್ಗೆ 11.40ರ ಹೊತ್ತಿಗೆ ಮಹಾತ್ಮ ಗಾಂಧಿ ಪ್ರತಿಮೆ ಎದುರು ಬಂದಿರುವ ಮಮತಾ ಅವರು, ಒಬ್ಬರೇ ಧರಣಿ ನಡೆಸಿದ್ದಾರೆ. ಅವರೊಂದಿಗೆ ಯಾವುದೇ ಟಿಎಂಸಿಯ ಕಾರ್ಯಕರ್ತತರು ಇರಲಿಲ್ಲ. ಆದರೆ ಚುನಾವಣಾ ಆಯೋಗದ ಕ್ರಮವನ್ನು ಖಂಡಿಸಿರುವ ತೃಣಮೂಲ ಕಾಂಗ್ರೆಸ್ 'ಪ್ರಜಾಪ್ರಭುತ್ವದ ಕರಾಳ ದಿನ' ಎಂದು ಹೇಳಿದೆ.
ಕೇಂದ್ರ ಭದ್ರತಾ ಪಡೆಗಳ ವಿರುದ್ಧವಾಗಿ ಹಾಗೂ ಧರ್ಮಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಚುನಾವಣಾ ಆಯೋಗವು 24 ಗಂಟೆ ಕಾಲ ದೀದಿ ಪ್ರಚಾರ ನಡೆಸುವುದಕ್ಕೆ ನಿಷೇಧ ಹೇರಿದೆ. ಸೋಮವಾರ ರಾತ್ರಿ 8ರಿಂದ ಮಂಗಳವಾರ ರಾತ್ರಿ 8ರವರೆಗೆ ನಿಷೇಧ ಜಾರಿಯಲ್ಲಿ ಇರಲಿದೆ.