ತಿರುವನಂತಪುರ, ಏ13 (DaijiworldNews/MS): ಕೇರಳ ಪಿಣರಾಯಿ ವಿಜಯನ್ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಕೆ.ಟಿ.ಜಲೀಲ್ ಮಂಗಳವಾರ ರಾಜೀನಾಮೆ ನೀಡಿದ್ದಾರೆ. ಕೆ.ಟಿ.ಜಲೀಲ್ ಸಾರ್ವಜನಿಕ ಸೇವಕರಾಗಿ ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಅಭಿಪ್ರಾಯಪಟ್ಟ ಬಳಿಕ ಅವರು ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿಗೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಈಗಾಗಲೇ ರಾಜ್ಯಪಾಲರಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಲೋಕಯುಕ್ತ ವಿಭಾಗೀಯ ಪೀಠವು, ಸಚಿವರ ವಿರುದ್ಧ ಅಧಿಕಾರ ದುರುಪಯೋಗ, ಒಲವು ಮತ್ತು ಸ್ವಜನಪಕ್ಷಪಾತದ ಆರೋಪ ಸಾಬೀತಾಗಿದ್ದು ಸಚಿವ ಸ್ಥಾನದಲ್ಲಿ ಹುದ್ದೆಯಲ್ಲಿ ಮುಂದುವರಿಯಬಾರದು ಎಂದು ಶುಕ್ರವಾರ ಜಲೀಲ್ ಅವರ ವಿರುದ್ಧದ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಿತ್ತು. ಲೋಕಾಯುಕ್ತ ಆದೇಶವನ್ನು ತಡೆಹಿಡಿಯಬೇಕೆಂದು ಕೋರಿ ಕೇರಳ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ ಮಾರನೇ ದಿನವೇ ಜಲೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜಲೀಲ್ ಅವರ ಸೋದರಸಂಬಂಧಿ ಆದೀಬ್ ಅವರನ್ನು ಕೇರಳ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ಹಣಕಾಸು ನಿಗಮದಲ್ಲಿ ಜನರಲ್ ಮ್ಯಾನೇಜರ್ ಆಗಿ ನೇಮಕ ಮಾಡಲಾಗಿದೆ ಎಂದು ಆರೋಪಿಸಿ ಮುಸ್ಲಿಂ ಯೂತ್ ಲೀಗ್ ಮುಖಂಡರು 2018 ರ ನವೆಂಬರ್ನಲ್ಲಿ ಸಲ್ಲಿಸಿದ್ದ ದೂರಿನ ಮೇರೆಗೆ ಲೋಕಯುಕ್ತ ತೀರ್ಪು ನೀಡಿದೆ.