ಬೆಳಗಾವಿ, ಎ.13 (DaijiworldNews/PY): "ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೋದಲೆಲ್ಲಾ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ರಣದೀಪ ಸಿಂಗ್ ಸುರ್ಜೇವಾಲಾ ಅವರು ರಾಹುಲ್ ಗಾಂಧಿಯನ್ನು ಹೊಗಳಿ, ಹೊಗಳಿ ಹಾಳು ಮಾಡಿದ್ದಾರೆ" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೈ ನಾಯಕರಿಗೆ ಸುಳ್ಳು ಹೇಳುವುದೇ ಕೆಲಸವಾಗಿದೆ. ಬಿಜೆಪಿ ಅಭ್ಯರ್ಥಿಯ ಬಗ್ಗೆ ಹಗುರವಾಗಿ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಚುನಾವಣಾ ಫಲಿತಾಮಶ ಸರಿಯಾದ ಉತ್ತರ ನೀಡಲಿದೆ" ಎಂದಿದ್ದಾರೆ.
ಬಿಜೆಪಿ ಪಾಲಿಗೆ ರಾಹುಲ್ ಗಾಂಧಿ ಸಿಂಹ ಸ್ವಪ್ನ ಎಂದಿದ್ದ ಸುರ್ಜೇವಾಲ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ರಾಹುಲ್ ಗಾಂಧಿ ಮೊದಲು ಬೆಳಗಾವಿಗೆ ಬರಲಿ. ಆಗ ಸಿಂಹವೋ, ಕುರಿಯ ಅಥವಾ ನರಿಯೋ ಎನ್ನುವುದು ತಿಳಿಯುತ್ತದೆ" ಎಂದು ಲೇವಡಿ ಮಾಡಿದ್ದಾರೆ.
"ಖಾಲಿ ಕೊಡ ತುಂಬಾ ಶಬ್ದ ಮಾಡುತ್ತದೆ. ಆದರೆ, ತುಂಬಿದ ಕೊಡ ಶಬ್ದ ಮಾಡುವುದಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ನಾಯಕರು ಖಾಲಿ ಕೊಡದ ರೀತಿ ಆಗಿದ್ದಾರೆ. ಮೊದಲು ಜನರು ಖಾಲಿ ಕೊಡವನ್ನು ನಂಬಿದ್ದರು. ಆದರೆ, ಜನರಿಗೆ ದ್ರೋಹ ಮಾಡಿದರು" ಎಂದು ಕಿಡಿಕಾರಿದ್ದಾರೆ.
"70 ವರ್ಷಗಳ ಕಾಲ ಆಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವು ದೇಶವನ್ನು ಅಧೋಗತಿಗೆ ತಂದಿತ್ತು. ಆದರೆ, ಪ್ರಸ್ತುತ ಪ್ರಧಾನಿ ಇಡೀ ಜಗತ್ತೇ ನಮ್ಮನ್ನು ನೋಡುವ ಹಾಗೇ ದೇಶವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿ.ಸುರೇಶ್ ಅಂಗಡಿ ಅವರು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಸುರೇಶ್ ಅಂಗಡಿ ಅವರ ಕನಸನ್ನು ನನಸು ಮಾಡುವ ಸಲುವಾಗಿ ಮಂಗಳಾ ಅಂಗಡಿ ಅವರನ್ನು ಗೆಲ್ಲಿಸಲು ಬಿಜೆಪಿ ಕಾನೂನು ಘಟಕ ಕೆಲಸ ಮಾಡಬೇಕು" ಎಂದಿದ್ದಾರೆ.