ಜೆಮ್ಶೆಡ್ಪುರ್, ಏ.13 (DaijiworldNews/HR): ಕಡ್ಮಾ ಪೊಲೀಸ್ ಠಾಣಾ ವ್ಯಾಪ್ತಿಯ ಟಿಸ್ಟಾ ರಸ್ತೆಯಲ್ಲಿರುವ ವಸತಿ ಕ್ವಾಟ್ರಸ್ನಲ್ಲಿ ವ್ಯಕ್ತಿಯೊಬ್ಬ ಇಬ್ಬರು ಅಪ್ರಾಪ್ತ ಬಾಲಕಿಯರು ಸೇರಿ ನಾಲ್ವರನ್ನು ಹತ್ಯೆ ಮಾಡಿರುವ ಘಟನೆ ನಡೆದಿದೆ.
ಆರೋಪಿಯನ್ನು ದೀಪಕ್ ಕುಮಾರ್(42) ಎಂದು ಗುರುತಿಸಲಾಗಿದೆ.
ಕೊಲೆಯಾದವರನ್ನು ಪತ್ನಿ ವೀಣಾ ಕುಮಾರಿ(35) ಅಪ್ರಾಪ್ತ ಮಕ್ಕಳನ್ನು ದಿಯಾ ಕುಮಾರಿ(15) ಹಾಗೂ ಸಂವಿ ಕುಮಾರಿ(11) ಜೊತೆಗೆ ಈ ಇಬ್ಬರು ಮಕ್ಕಳಿಗೆ ಟ್ಯೂಷನ್ ನೀಡುತ್ತಿರುವ ಶಿಕ್ಷಕಿ ರಿಂಕಿ ಘೋಷ್(22) ಎಂದು ಗುರುತಿಸಲಾಗಿದೆ.
ದೀಪಕ್ ಟಾಟಾ ಸ್ಟೀಲ್ ಕಂಪನಿಯ ಉದ್ಯೋಗಿಯಾಗಿದ್ದು, ಸೋಮವಾರ ಮಧ್ಯಾಹ್ನದ ವೇಳೆಯಲ್ಲಿ ದೀಪಕ್ ತನ್ನಿಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿ ನಾಲ್ವರನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.
ಘೋಷ್ ಅವರು ಸೋಮವಾರ ಬೆಳಗ್ಗೆ 11 ಗಂಟೆಗೆ ದಿಯಾ ಹಾಗೂ ಸಂವಿಗೆ ಟ್ಯೂಶನ್ ಕೊಡಲು ಬಂದಿದ್ದು, ಮಧ್ಯಾಹ್ನ 1 ಗಂಟೆಯಾದರೂ ತನ್ನ ಮನೆಗೆ ವಾಪಸ್ ಹೋಗಿರಲಿಲ್ಲ. ಹಾಗಾಗಿ ರಿಂಕಿ ಪೋಷಕರು ಆಕೆಯನ್ನು ಹುಡುಕಿಕೊಂಡು ದೀಪಕ್ ನಿವಾಸಕ್ಕೆ ಬಂದಿದ್ದು, ಈ ವೇಳೆ ದೀಪಕ್ ಮನೆಯಲ್ಲಿ ಏನೋ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿ ಮನೆಯ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ಅಡುಗೆ ಮನೆಯಲ್ಲಿ ರಿಂಕಿ ಸೇರಿದಂತೆ ನಾಲ್ವರ ಮೃತದೇಹಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಬಂದಿದೆ.
ಮೃತ ಮಹಿಳೆ ವೀಣಾ ಸಹೋದರ ವಿನೋದ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿ, ಮಧ್ಯಾಹ್ನದ ಬಳಿಕ ಸಹೋದರಿಯ ಮನೆಗೆ ಬಂದಿದ್ದು, ಈ ವೇಳೆ ಮನೆಯ ಬಾಗಿಲು ಮುಚ್ಚಿತ್ತು. ಆದರೆ ಒಳಗಡೆ ಎಸಿ ಆನ್ ಆಗಿತ್ತು. ಹೀಗಾಗಿ ಮನೆಯೊಳಗೆ ಇದ್ದಾರೆ ಅಂತ ಕಿಟಿಕಿ ಮೂಲಕ ನೋಡಿದೆ. ಈ ವೇಳೆ ಇಬ್ಬರು ಸೊಸೆಯರ ಹಾಗೂ ಸಹೋದರಿಯ ಮೃತದೇಹ ಬೆಡ್ ಮೇಲೆ ಬಿದ್ದಿರುವುದು ಗಮನಕ್ಕೆ ಬಂತು ಎಂದರು.
ಹಿಂದಿನ ದಿನ ದೀಪಕ್ ಮನೆಗೆ ಬಂದು ಪತ್ನಿಯ ಒಡವೆಗಳನ್ನು ತೆಗೆದುಕೊಂಡು ಹೋಗಿದ್ದು, ಅಲ್ಲದೆ ಪತ್ನಿ ಹಾಗೂ ಮಕ್ಕಳನ್ನು ರಾಂಚಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ಕಳುಹಿಸುವುದಾಗಿ ತಿಳಿಸಿದ್ದನು ಎಂದು ವಿನೋದ್ ಕುಮಾರ್ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ನಗರ ಎಸ್ಪಿ ಸುಭಾಷ್ ಚಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.