ಕೋಲ್ಕತ್ತಾ, ಏ13 (DaijiworldNews/MS): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ "ಪ್ರಚೋದನಕಾರಿ ಹೇಳಿಕೆ" ನೀಡಿದ ಹಿನ್ನಲೆಯಲ್ಲಿ ಭಾರತೀಯ ಜನತಾ ಪಕ್ಷದ ನಾಯಕ ರಾಹುಲ್ ಸಿನ್ಹಾ ಅವರನ್ನು 48 ಗಂಟೆಗಳ ಕಾಲ ಪ್ರಚಾರ ನಡೆಸದಂತೆ ಭಾರತದ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ.
ಮಾನವನ ಅಮೂಲ್ಯ ಜೀವವನ್ನು ಅಪಹಾಸ್ಯ ಮಾಡುವ ಮೂಲಕ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದು, ಇದು ಕಾನೂನು ಸುವ್ಯವಸ್ಥೆಯ ಗಂಬೀರ ಪರಿಣಾಮಗಳನ್ನು ಉಂಟುಮಾಡುವ ಶಕ್ತಿಗಳನ್ನು ಪ್ರಚೋದಿಸಿ ಚುನಾವಣಾ ಪ್ರಕ್ರಿಯೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಹೇಳಿರುವ ಆಯೋಗ, ತುತು ವಿಚಾರವಾಗಿರುವ ಕಾರಣ ಯಾವುದೇ ನೋಟಿಸ್ ನೀಡದೆ " ನಾಳೆ ಬೆಳಿಗ್ಗೆ 10 ಗಂಟೆಯೊಳಗೆ ರಾಹುಲ್ ಸಿನ್ಹಾ ಅವರಲ್ಲಿ ತನ್ನ ನಿಲುವನ್ನು ವಿವರಿಸಲು ಆದೇಶ ನೀಡಿದೆ.
"ನಾಲ್ಕು ಮಂದಿಯಲ್ಲ, 8 ಮಂದಿಯನ್ನು ಸಿಟಾಲ್ಕುಚಿಯಲ್ಲಿ ಗುಂಡಿಟ್ಟು ಸಾಯಿಸಬೇಕಾಗಿತ್ತು. ನೀವೇಕೆ ನಾಲ್ಕುಮಂದಿಯನ್ನು ಕೊಂದಿದ್ದು, 8 ಮಂದಿಯನ್ನು ಏಕೆ ಕೊಂದಿಲ್ಲ ಎಂದು ಕೇಂದ್ರ ಭದ್ರತಾ ಪಡೆಗಳಿಗೆ ಶೋಕಾಸ್ ನೋಟಿಸ್ ನೀಡಬೇಕಾಗಿತ್ತು" ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮುಖಂಡ ರಾಹುಲ್ ಸಿನ್ಹಾ ಸೋಮವಾರ ಹೇಳಿದ್ದರು. ಇದೇ ಹೇಳಿಕೆಗೆ ಸಂಬಂಧಪಟ್ಟಂತೆ ರಾಹುಲ್ ಸಿನ್ಹಾ ಅವರು 48 ಗಂಟೆಗಳ ಕಾಲ ಚುನಾವಣೆ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿದೆ.