ಧಾರವಾಡ, ಏ.13 (DaijiworldNews/MB) : ಸೋಮವಾರ ಇಲ್ಲಿನ ಇಲ್ಲಿನ ಹೊಸ ಬಸ್ ನಿಲ್ದಾಣದ ಬಳಿ ರಸ್ತೆ ಅಪಘಾತ ಸಂಭವಿಸಿದ ಸಂದರ್ಭ ಕಾರನ್ನು ನಾನೇ ಓಡಿಸುತ್ತಿದ್ದೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಸೋದರ ವಿಜಯ ಕುಲಕರ್ಣಿ ಹೇಳಿದ್ದಾರೆ.
ಸೋಮವಾರ ಸಂಜೆ ಇಲ್ಲಿನ ಕುಮಾರೇಶ್ವರ ನಗರ ಬಳಿ ವಿಜಯ ಕುಲಕರ್ಣಿ ಅವರ ಕಾರು ರಸ್ತೆಪಕ್ಕದಲ್ಲಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಚರಣ ನಾಯಕ್ (17) ಹಾಗೂ ಶೇಖರ ಹುದ್ದಾರ (40) ಎಂಬುವವರು ಸಾವನ್ನಪ್ಪಿದ್ದರು. ಮತ್ತಿಬ್ಬರಿಗೆ ಗಾಯವಾಗಿದ್ದವು. ಈ ಸಂದರ್ಭ ಅವರು ಪಾನಮತ್ತರಾಗಿದ್ದರು ಎಂದು ವರದಿಯಾಗಿದ್ದವು.
ಸೋಮವಾರ ತಡರಾತ್ರಿ 12ರ ಸುಮಾರಿಗೆ ಸಂಚಾರ ಠಾಣೆಗೆ ವಿಜಯ ಕುಲಕರ್ಣಿ ಅವರು ಭೇಟಿಯಾಗಿದ್ದು ಅಪಘಾತ ಸಂಭವಿಸಿದ ಸಂದರ್ಭ ಕಾರನ್ನು ನಾನೇ ಓಡಿಸುತ್ತಿದ್ದೆ. ನಾನು ಮುಂಭಾಗದಿಂದ ಬರುತ್ತಿದ್ದ ಬೈಕ್ ತಪ್ಪಿಸಲು ಹೋಗಿ ಪಕ್ಕದಲ್ಲಿದ್ದ ಬೈಕ್ಗಳಿಗೆ ಡಿಕ್ಕಿಯಾಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿ ಕಾರು ಚಲಾಯಿಸುವ ಸಂದರ್ಭ ಪಾನಮತ್ತರಾಗಿದ್ದಾರೆಯೇ ಎಂದು ಪರೀಕ್ಷಿಸಲು ರಕ್ತದ ಮಾದರಿಯನ್ನೂ ನೀಡಿದ್ದಾರೆ ಎಂದು ವರಿದಿಯಾಗಿದೆ. ಹಾಗೆಯೇ ಪೊಲೀಸರು ಕಾರು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಜಯ ಕುಲಕರ್ಣಿ ಅವರು, ''ನಾನು ಬೆಳಗಾವಿಯಿಂದ ಹಿಂದಿರುಗುತ್ತಿದ್ದ ವೇಳೆ ಎದುರಿನಂದು ಬರುತ್ತಿದ್ದ ಬೈಕ್ನ್ನು ತಪ್ಪಿಸಲು ಹೋಗಿ ಹತ್ತಿರದ ಬೈಕ್ಗಳಿಗೆ ಬಂದು ಕಾರು ಡಿಕ್ಕಿ ಹೊಡೆದಿದೆ. ಕೂಡಲೇ ನಾನೇ ಪೊಲೀಸರಿಗೆ ಕರೆ ಮಾಡಿದ್ದು, ಆಂಬುಲೆನ್ಸ್ ಕರೆಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಕಳುಹಿಸಿದ್ದೆ. ಬಳಿಕ ಅಲ್ಲಿಂದ ತೆರಳಿದ್ದೆ. ಆದರೆ ಕೆಲವು ಮಾಧ್ಯಮಗಳು ನಾನು ಮದ್ಯಪಾನ ಮಾಡಿ ಕಾರು ಚಲಾಯಿಸುತ್ತಿದ್ದೆ ಹಾಗೂ ಸ್ಥಳದಿಂದ ತಪ್ಪಿಸಿಕೊಂಡೆ ಎಂದೆಲ್ಲಾ ವರದಿ ಮಾಡಿದೆ. ಅದಕ್ಕಾಗಿ ನಾನು ನೇರವಾಗಿ ಪೊಲೀಸ್ ಠಾಣೆಗೆಯೇ ಬಂದು ನನ್ನ ಹೇಳಿಕೆ ನೀಡಿದ್ದೇನೆ ಹಾಗೆಯೇ ಅವರೊಂದಿಗೆ ಆಸ್ಪತ್ರೆಗೆ ತೆರಳಿ ರಕ್ತದ ಮಾದರಿಯನ್ನೂ ಪರೀಕ್ಷೆಗೆ ನೀಡಿದ್ದೇನೆ. ಇದೊಂದು ಆಕಸ್ಮಿಕವಾಗಿ ನಡೆದ ದುರಂತವಷ್ಟೇ'' ಎಂದು ಹೇಳಿದ್ದಾರೆ.