ರಾಮನಗರ, ಏ.13 (DaijiworldNews/HR): "ಕರ್ನಾಟಕದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವಾಗಲೂ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಲೋಕಸಭೆ, ವಿಧಾನಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಏಕೆ ಮುಂದೂಡಲಿಲ್ಲ" ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡವಳಿಕೆ ಹಾಗೂ ಅವೈಜ್ಞಾನಿಕ ಕ್ರಮಗಳಿಂದಾಗಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವುದಕ್ಕೆ ಕಾರಣವಾಗಿದ್ದು, ರಾಜ್ಯ ಸರ್ಕಾರ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಹಲವಾರು ನಿಯಮಗಳನ್ನು ಜಾರಿಗೆ ತಂದಿದೆ. ಹೀಗಿದ್ದರೂ ನಿಯಮಗಳನ್ನು ಉಲ್ಲಂಘಿಸಿ ಲೋಕಸಭೆ, ವಿಧಾನಸಭೆ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರದಲ್ಲಿ ಅನೇಕ ಜನರು ಸೇರುತ್ತಿದ್ದು, ಈ ವೇಳೆ ಚುನಾವಣೆ ಏಕೆ ಘೋಷಣೆ ಮಾಡಬೇಕಾಗಿತ್ತು" ಎಂದು ಪ್ರಶ್ನಿಸಿದ್ದಾರೆ.
ಇನ್ನು "ಸಾರಿಗೆ ನೌಕರರ ವಿಚಾರದಲ್ಲಿ ರಾಜ್ಯ ಸರ್ಕಾರ ಬಿಗಿ ಧೋರಣೆ ಅನುಸರಿಸುವುದು ಸರಿಯಲ್ಲ, ಮುಖ್ಯಮಂತ್ರಿ ಯಡಿಯೂರಪ್ಪರವರು ನೌಕರರ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಅವರೊಂದಿಗೆ ಗೌರವಯುತವಾಗಿ ಚರ್ಚಿಸಿ ಕಾಲಾವಕಾಶ ಕೇಳಬೇಕು. ಮುಖ್ಯಮಂತ್ರಿಗಳು ಸಾರಿಗೆ ನೌಕರರೊಂದಿಗೆ ಚರ್ಚಿಸುವ ಸೌಜನ್ಯವನ್ನು ತೋರದೆ ಕಾನೂನಿನ ಮೂಲಕ ಹೆದರಿಸುತ್ತೇವೆ ಎನ್ನುವುದು ಸರಿಯಲ್ಲ" ಎಂದಿದ್ದಾರೆ.