ಬೆಂಗಳೂರು, ಏ.13 (DaijiworldNews/MB): ಪತಿಯ ಕುಡಿತದ ಚಟದಿಂದ ಬೇಸತ್ತು ಪತಿಯ ಕುತ್ತಿಗೆಗೆ ಕಾಲುಗಳಿಂದ ಅದುಮಿ ಪತ್ನಿಯೇ ಹತ್ಯೆಗೈದ ಘಟನೆ ಜೆ.ಜೆ. ನಗರ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಓಬಳೇಶ್ ಕಾಲೋನಿ ನಿವಾಸಿ ಮೋಹನ್ (41) ಮೃತ ವ್ಯಕ್ತಿ. ಪತ್ನಿ ಪದ್ಮಾ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
ಬಿಬಿಎಂಪಿ ಪೌರ ಕಾರ್ಮಿಕರಾಗಿರುವ ಮೋಹನ್ ಮತ್ತು ಪದ್ಮಾ 2004ರಲ್ಲಿ ವಿವಾಹವಾಗಿದ್ದು ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ. ಮೋಹನ್ಗೆ ಮದ್ಯಪಾನದ ಚಟವಿದ್ದು ಆರು ತಿಂಗಳ ಹಿಂದೆ ಕುಡಿತದ ಚಟ ಬಿಡಿಸುವ ಪುರ್ನವಸತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದರೆ ಆತ ಅಲ್ಲಿಂದ ಹೊರ ಬಂದು ಕೆಳ ದಿನದ ನಂತರ ಮತ್ತೆ ಕುಡಿಯಲು ಆರಂಭಿಸಿದ್ದಾನೆ.
ಈ ವಿಚಾರದಲ್ಲೇ ಇಬ್ಬರ ಮಧ್ಯೆ ಜಗಳವಾಗುತ್ತಿತ್ತು. ಭಾನುವಾರ ಮದ್ಯಪಾನ ಮಾಡಿ ಬಂದ ಪತಿ ಮೋಹನ್ ಪತ್ನಿಯ ಬಳಿ ಹಣ ನೀಡುವಂತೆ ಹೇಳಿದ್ದಾನೆ. ಈ ವಿಚಾರದಲ್ಲೇ ಜಗಳ ಮಿತಿಮೀರಿದ್ದು ಕೋಪಗೊಂಡ ಪದ್ಮಾ ಪತಿಯನ್ನು ದೂಡಿ ಆತನ ಕುತ್ತಿಗೆಗೆ ಕಾಲಿಟ್ಟು ತುಳಿದಿದ್ದಾಳೆ.
ಬಳಿಕ ಆತನನ್ನು ಸ್ಥಳೀಯರ ನೆರವಿನೊಂದಿಗೆ ಆಕೆ ಸಮೀಪದ ಆಸ್ಪತ್ರೆಗೆ ದಾಖಲು ಮಾಡಿದರೂ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಸೋಮವಾರ ಪದ್ಮಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಈ ವೇಳೆ ವಿಚಾರ ಬೆಳಕಿಗೆ ಬಂದಿದೆ.