ತಿರುವನಂತಪುರ, ಏ.13 (DaijiworldNews/MB) : ''ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು'' ಎಂದು ಕೇರಳದ ಪೂಂಜಾರ್ ಕ್ಷೇತ್ರವನ್ನು ಪ್ರತಿನಿಧಿಸುವ ಜನಪಕ್ಷನ್ (ಜಾತ್ಯತೀತ) ಪಕ್ಷದ ಶಾಸಕ ಪಿ ಸಿ ಜಾರ್ಜ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸೊಸೈಟಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ''ಭಯೋತ್ಪಾದನೆಯನ್ನು ಎದುರಿಸಲು ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು'' ಎಂದು ಹೇಳಿದರು.
''2030 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಸಲುವಾಗಿ ಕೇರಳದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತು ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್ಡಿಎಫ್) ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿವೆ'' ಎಂದು ಅವರು ಆರೋಪಿಸಿದರು.
''ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2016 ರಲ್ಲಿ ನೋಟ್ ಬ್ಯಾನ್ ಮಾಡುವ ಮೂಲಕ ಹೊರ ದೇಶದವರ ದೇಣಿಗೆ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಯೋಜನೆಯನ್ನು ಇನ್ನಷ್ಟು ವಿಳಂಬಗೊಳಿಸಿದರು'' ಎಂದು ಜಾರ್ಜ್ ಹೇಳಿದ್ದಾರೆ.
''ಇನ್ನು ಮುಸ್ಲಿಮರು ಫ್ರಾನ್ಸ್ನಂತಹ ಕ್ರೈಸ್ತ ರಾಷ್ಟ್ರಗಳನ್ನು ಅತಿಕ್ರಮಿಸುತ್ತಿದ್ದಾರೆ. ಆ ರಾಷ್ಟ್ರವನ್ನು ಇಸ್ಲಾಮಿಕ್ ರಾಷ್ಟ್ರಗಳಾಗಿ ಪರಿವರ್ತಿಸುತ್ತಿದ್ದಾರೆ'' ಎಂದು ಆರೋಪಿಸಿದರು.
ಲವ್ ಜಿಹಾದ್ ಕುರಿತು ಮಾತನಾಡಿದ ಅವರು, ''ಲವ್ ಜಿಹಾದ್ ನಿಜ, ಕೇರಳದಲ್ಲಿ ಇದು ಅಸ್ತಿತ್ವದಲ್ಲಿದೆ. ಇಲ್ಲಿ ಮತಾಂತರ ಮಾಡುವ ಸಲುವಾಗಿಯೇ ಮೋಸದ ವಿವಾಹವಾಗುವ ಪ್ರಕರಣಗಳು ಹಲವು ನಡೆದಿದೆ'' ಎಂದು ದೂರಿದರು.
ಕೇರಳ ರಾಜಕೀಯದಲ್ಲಿ "ಒನ್ ಮ್ಯಾನ್ ಆರ್ಮಿ" ಎಂದು ಹೆಸರುವಾಸಿಯಾದ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಜಾರ್ಜ್ ಅವರು ಈ ಹಿಂದೆ ಹಲವಾರು ಬಾರಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.