ಬೆಂಗಳೂರು, ಏ.13 (DaijiworldNews/HR): "ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಮೊರೆ ಹೋಗಬಹುದು ಎಂಬ ಮಾತುಗಳು ಕೇಳಿಬರುತ್ತಿದ್ದು, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕೂಡ ತಾಂತ್ರಿಕ ಸಲಹಾ ಸಮಿತಿ ಲಾಕ್ಡೌನ್ ಮಾಡಲು ಸೂಚಿಸಿದೆ ಎಂದು ಹೇಳಿದ್ದರು. ಆದರೆ, ಇದೆಲ್ಲವನ್ನೂ ನಿರಾಕರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ "ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್ ಪ್ರಶ್ನೆಯೇ ಇಲ್ಲ" ಎಂದು ಹೇಳಿದ್ದಾರೆ.
ಲಾಕ್ಡೌನ್ ಮಾಡಲು ತಾಂತ್ರಿಕ ಸಲಹಾ ಸಮಿತಿ ಸೂಚಿಸಿದೆ ಎಂಬ ಸುಧಾಕರ್ ಹೇಳಿಕೆ ಬಗ್ಗೆ ಉತ್ತರಿಸಿದ ಸಿಎಂ, "ನಾನು ಕೂಡಾ ಸಲಹಾ ಸಮಿತಿಯಲ್ಲಿ ಇದ್ದೇನೆ. ಯಾರೂ ಲಾಕ್ಡೌನ್ಗೆ ಸೂಚನೆ ನೀಡಿಲ್ಲ. ಸುಮ್ಮನೇ ಸುಳ್ಳು ಸುದ್ದಿ ಹರಡಬೇಡಿ ಕರ್ನಾಟಕದಲ್ಲಿ ಸದ್ಯಕ್ಕೆ ಲಾಕ್ಡೌನ್ ಮಾಡುವ ಪ್ರಶ್ನೆ ಇಲ್ಲವೇ ಇಲ್ಲ" ಎಂದರು.
ಇನ್ನು "ಕೊರೊನಾವನ್ನು ನಿಯಂತ್ರಿಸುವುದಕ್ಕೆ ಜನತೆ ಸಹಕಾರ ನೀಡಬೇಕು, ಕೊರೊನಾ ತಡೆ ಬಗ್ಗೆ ಸರ್ವಪಕ್ಷ ಸಭೆಯಲ್ಲಿ ಸಲಹೆ ಪಡೆದು ತೀರ್ಮಾನಿಸುತ್ತೇವೆ. ಏನೇನು ಮಾಡಬೇಕೆಂದು ನಂತರ ನಿರ್ಧರಿಸುತ್ತೇವೆ" ಎಂದಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಸರ್ವಪಕ್ಷ ಸಭೆಗೆ ಬರುವುದಿಲ್ಲವೆಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ, "ಸಭೆ ಕರೆಯಿರಿ ಎಂದು ಅವರೇ ಹೇಳಿದ್ದು ಈಗ ಬರಲ್ಲ ಅಂತಾರೆ. ಸಭೆಗೆ ಕರೆಯುತ್ತೇವೆ, ಬರುವುದು, ಬಿಡುವುದು ಅವರಿಗೆ ಬಿಟ್ಟಿದ್ದು" ಎಂದು ಹೇಳಿದ್ದಾರೆ.