ಕೋಲ್ಕತ, ಎ.13 (DaijiworldNews/PY): ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ಟಿಎಂಸಿ ಪಕ್ಷಗಳ ಪ್ರಚಾರ ಜೋರಾಗಿ ನಡೆಯುತ್ತಿದೆ. ಈಗಾಗಲೇ ನಾಲ್ಕು ಹಂತದ ಮತದಾನ ಮುಕ್ತಾಯವಾಗಿದ್ದು, ಇನ್ನೂ ನಾಲ್ಕು ಹಂತದ ಮತದಾನ ಬಾಕಿ ಇದೆ.
ಏತನ್ಮಧ್ಯೆ, ಚುನಾವಣಾ ಆಯೋಗ ಪಶ್ಚಿಮಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ 24 ತಾಸು ಪ್ರಚಾರ ನಡೆಸದಂತೆ ನಿರ್ಬಂಧ ಹೇರಿದೆ. ಈ ನಿರ್ಬಂಧವು ಸೋಮವಾರ ರಾತ್ರಿ 8ರಿಂದ ಮಂಗಳವಾರ ರಾತ್ರಿ 8ರವರೆಗೆ ಅನ್ವಯವಾಗಲಿದೆ.
ಈ ಬಗ್ಗೆ ಟ್ವೀಟ್ ಮಮತಾ, ಭಾರತದ ಚುನಾವಣಾ ಆಯೋಗದ ಪ್ರಜಾಪ್ರಭುತ್ವ ವಿರೋಧಿ ಹಾಗೂ ಅಸಂವಿಧಾನಿಕ ನಿರ್ಧಾರವನ್ನು ವಿರೋಧಿಸಿ ಮಂಗಳವಾರ ಮಧ್ಯಾಹ್ನ 12ರಿಂದ ಕೋಲ್ಕತ್ತಾದ ಗಾಂಧಿ ಮೂರ್ತಿಯಲ್ಲಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
"ಕೇಂದ್ರೀಯ ಪಡೆಗಳ ವಿರುದ್ದ ಆರೋಪ ನಡೆಸಿ, ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರವಾದ ಪರಿಣಾಮ ಉಂಟು ಮಾಡಿರುವ ಹಾಗೂ ಧರ್ಮದ ಬಗ್ಗೆ ನೀಡಿರುವ ಪ್ರಚೋದನಕಾರಿ ಹೇಳಿಕೆಯಿಂದ ಮಾದರಿ ನೀತಿ ಸಂಹಿತೆ, ಪ್ರಜಾಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಕಾರಣದಿಂದ ಕ್ರಮ ತೆಗೆದುಕೊಳ್ಳಲಾಗಿದೆ" ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ವಿವರಿಸಿದೆ.