ಬೆಂಗಳೂರು, ಏ.13 (DaijiworldNews/HR): "ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಾರದೊಳಗೆ ಶೇ.50ರಷ್ಟು ಹಾಸಿಗೆಯನ್ನು ಸೋಂಕಿತರ ಚಿಕಿತ್ಸೆಗೆ ಮೀಸಲಿಡುವುದಕ್ಕೆ ಹಾಗೂ ಪ್ರಸ್ತುತ ಆಸ್ಪತ್ರೆಗೆ ದಾಖಲಾಗಿರುವ ಕೊರೊನಾವಿಲ್ಲದ ಗಂಭೀರ ಅನಾರೋಗ್ಯವಿಲ್ಲದ ರೋಗಿಗಳ ಮನವೊಲಿಸಿ ಡಿಸ್ಚಾರ್ಜ್ ಮಾಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ.
ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ಗಳ ಸಂಘಟನೆ ಪದಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ವಾರದೊಳಗೆ ಶೇ.50ರಷ್ಟು ಹಾಸಿಗೆ ಮೀಸಲಿಡುವುದಕ್ಕೆ ಹಾಗೂ ಈಗ ದಾಖಲಾಗಿರುವ ಕೊರೊನಾ ಅಲ್ಲದ ತುರ್ತಿಲ್ಲದ ರೋಗಿಗಳಿಗೆ ಮನವಿ ಮಾಡಿ ಡಿಸ್ಚಾರ್ಜ್ ಮಾಡಲು ಖಾಸಗಿ ಆಸ್ಪತ್ರೆಗಳು ಒಪ್ಪಿಕೊಂಡಿವೆ" ಎಂದರು.
ಇನ್ನು "ಅಲ್ಪ ರೋಗ ಲಕ್ಷಣ ಹಾಗೂ ಲಕ್ಷಣ ರಹಿತ ರೋಗಿಗಳಿಗೆ ಹೋಟೆಲ್ಗಳಲ್ಲಿ, ಕೊರೊನಾ ಆರೋಗ್ಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿದ್ದು, ಆಸ್ಪತ್ರೆಗಳೇ ಹೋಟೆಲ್ಗಳಲ್ಲಿ ಹಾಸಿಗೆ ವ್ಯವಸ್ಥೆ ಮಾಡಿ ಆರೋಗ್ಯ ಕೇಂದ್ರ ನಿರ್ವಹಿಸಬೇಕು. ಆಸ್ಪತ್ರೆಗಳಲ್ಲಿ ಅನಿವಾರ್ಯ ಇರುವವರಿಗೆ ಮಾತ್ರ ಚಿಕಿತ್ಸೆ ನೀಡಬೇಕೆಂದು ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.