ಕೊಪ್ಪಳ, ಏ13 (DaijiworldNews/MS): ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬಾಯಿಗೆ ಬಂದ ಹಾಗೆ ಮಾತಾಡುವ ವ್ಯಕ್ತಿ, ಇಂತವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಅವರೊಬ್ಬ ಜೋಕರ್ ವಿದೂಷಕ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಮಸ್ಕಿ ಉಪಚುನಾವಣೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಮಾದ್ಯಮದೊಂದಿಗೆ ಮಾತನಾಡಿದ ಅವರು," ಸೋನಿಯಾ ಗಾಂಧಿ ಅವರಿಗೆ ಅನುಭವ ಇರುವುದಕ್ಕೆ ಅವರು ಪ್ರಧಾನಮಂತ್ರಿಯಾಗದೆ, ಮನಮೋಹನ ಸಿಂಗ್ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಇಂತಹ ತ್ಯಾಗ ಮನೋಭಾವ ಬಿಜೆಪಿ ಮುಖಂಡರಿಗೆ ಇದೆಯಾ? ಎಂದು ಇದೇ ವೇಳೆ ಪ್ರಶ್ನಿಸಿದರು.
ಇದೇ ವೇಳೇ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಳ ಅಂಗಡಿ ಅವರ ಬಗ್ಗೆ ಅವಹೇಳನಕಾರಿಯಾಗಿ ಯಾವುದೇ ಹೇಳಿಕೆ ನೀಡಿಲ್ಲ. ಹೀಗಾಗಿ ಕ್ಷಮೆಯನ್ನು ಯಾಚಿಸುವುದಿಲ್ಲ. ನಾನೂ ಯಾರನ್ನೂ ಅವಮಾನಿಸಿಲ್ಲ ಎಂದ ಮೇಲೆ ಕ್ಷಮೆ ಯಾಕೆ ಕೇಳಬೇಕು ಎಂದು ಪ್ರಶ್ನಿಸಿದರು.
ಸುರೇಶ ಅಂಗಡಿ ನಾಲ್ಕು ಬಾರಿ ಸಂಸದರಾಗಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ದೊರಕಬೇಕಾದ ಪಾಲನ್ನು ಕೇಳಲೇ ಇಲ್ಲ. ಇನ್ನು, ಯಾವುದೇ ರಾಜಕೀಯ ಅನುಭವವಿಲ್ಲದ ಮಂಗಲ ಕೇಳಲು ಸಾಧ್ಯವೇ ? ಎಂದು ಜನರ ಬಳಿ ಪ್ರಶ್ನೆ ಇಟ್ಟಿದ್ದೇನೆ ಅಷ್ಟೆ ಎಂದರು.