ಬೆಂಗಳೂರು, ಎ.13 (DaijiworldNews/PY): "ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಖಾಸಗೀಕರಣ ಮಾಡುವ ಉದ್ದೇಶವೇನಾದರೂ ರಾಜ್ಯ ಸರ್ಕಾರಕ್ಕಿದ್ದರೆ ಆ ಆಲೋಚನೆಯನ್ನು ಬಿಡಬೇಕು" ಎಂದು ಮಾಜಿ ಸಾರಿಗೆ ಸಚಿವರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಕಾಂಗ್ರೆಸ್ ಮುಖಂಡ ಹೆಚ್.ಎಂ. ರೇವಣ್ಣ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಾರಿಗೆ ನೌಕರರ ಬೇಡಿಕೆಗಳಲ್ಲಿ ಯಾವ ಬೇಡಿಕೆ ಈಡೇರುತ್ತದೆ ಯಾವುದು ಈಡೇರುವುದಿಲ್ಲ ಎನ್ನುವುದನ್ನು ಸರಿಯಾಗಿ ತಿಳಿಸಬೇಕಿತ್ತು. ಈ ವಿಚಾರದ ಬಗ್ಗೆ ನೋಡೋಣ, ಮಾಡೋಣ ಎಂದು ಹೇಳಿದ ಕಾರಣ ಹೀಗಾಗಿದೆ" ಎಂದಿದ್ದಾರೆ.
"ಸಾರಿಗೆ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಆಗುವುದಿಲ್ಲ ಎನ್ನುವುದು ನಿಜ. ಹಾಗಾದಿದ್ದರೂ, ಮುಷ್ಕರನಿರತರೊಂದಿಗೆ ಮಾತುಕತೆ ನಡೆಸಲಿ. ಸಚಿವರು ಕೆಎಸ್ಆರ್ಟಿಸಿಯನ್ನು ಮುಳುಗುತ್ತಿರುವ ಹಡಗು ಎಂದು ಹೇಳುವುದು ಸೂಕ್ತವಲ್ಲ" ಎಂದು ಹೇಳಿದ್ದಾರೆ.
"ರೇವಣ್ಣ ಹಾಗೂ ನಾನು ಇಬ್ಬರೂ ಕೂಡಾ ಸಾರಿಗೆ ಸಚಿವರಾಗಿದ್ದೆವು. ನಾನು ಸಾರಿಗೆ ಸಚಿವನಾಗಿದ್ದ ಸಂದರ್ಭ ವೇತನ ಬಡ್ತಿಗಾಗಿ ಪ್ರತಿಭಟನೆ ನಡೆದಿತ್ತು. ಶೇ 15ರಷ್ಟು ಏರಿಕೆ ಕೇಳಿದಾಗ, ಶೇ 8ರಷ್ಟು ವೇತನ ಭಡ್ತಿ ಮಾಡುವುದಾಗಿ ತಿಳಿಸಿದ್ದೆವು. ಬಳಿಕ ಮಾತುಕತೆ ನಡೆಸಿ ವೇತನ ಭಡ್ತಿಯನ್ನು ಶೇ 12.5 ಮಾಡಿದ್ದೆವು" ಎಂದು ತಿಳಿಸಿದ್ದಾರೆ.
"ಖಾಸಗಿಯವರು ಲಾಭ ಇದ್ದರೆ ಮಾತ್ರವೇ ಬಸ್ ಓಡಿಸುತ್ತಾರೆ. ಆದರೆ, ಸಾರಿಗೆ ಇಲಾಖೆ ಆ ರೀತಿ ಅಲ್ಲ. ಶೇ.0ರಷ್ಟು ಬಸ್ಗಳಿಂದ ನಷ್ಟವಾಗುತ್ತದೆ" ಎಂದಿದ್ದಾರೆ.
"ಸಾರಿಗೆ ನೌಕರರು ಕಳೆದ ಬಾರಿ ಮುಷ್ಕರ ನಡೆದಾಗಲೇ ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಆದರೆ. ಸಿಎಂ ಹಾಗೂ ಅನಾನುಭವಿ ಸಚಿವರಿಂದ ಇಂದು ಹೀಗಾಗಿದೆ. ಕೆಎಸ್ಆರ್ಟಿಸಿ ಇರಬಾರದು ಎನ್ನುವುದು ಬಿಜೆಪಿಗರ ಒಳಚಿಂತನೆ" ಎಂದು ತಿಳಿಸಿದ್ದಾರೆ.
"ಸಾರಿಗೆ ಸಚಿವರಿಗೆ ಇಲಾಖೆಯ ನಡೆಸುವ ಸಾಮರ್ಥ್ಯ ಇಲ್ಲ. ಈ ಹಿಂದೆ ಸಾರಿಗೆ ಸಚಿವರನ್ನು ಕರೆದು ಈ ವಿಚಾರದ ಬಗ್ಗೆ ಮಾತುಕತೆ ನಡೆಸಲಿ. ಸರ್ವಪಕ್ಷ ಸಭೆ ಕರೆಯಲಿ' ಎಂದಿದ್ದಾರೆ.