ಬೆಂಗಳೂರು, ಏ. 12 (DaijiworldNews/SM): ಉಪಚುನಾವಣೆಗೆ ಸಿದ್ಧತೆ ನಡೆಯುತ್ತಿರುವ ನಡುವೆಯೇ ಸಿಎಂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ಅಲ್ಲದೆ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಉಪಚುನಾವಣೆಯಲ್ಲಿ ಸೋಲಿನ ಭೀತಿ ಮುಖ್ಯಮಂತ್ರಿಗಳಿಗೆ ಎದುರಾಗಿದೆ. ಈ ಕಾರಣದಿಂದಾಗಿ ಮತಕ್ಷೇತ್ರಗಳಲ್ಲಿ ಸಿಎಂ ಯಡಿಯೂರಪ್ಪ ಜಾತಿವಾರು ಸಭೆ ನಡೆಸುತ್ತಿದ್ದಾರೆ. ಈ ಕಾರಣದಿಂದಾಗಿ ಮುಖ್ಯಮಂತ್ರಿಗಳ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಇಲ್ಲದೇ ಹೋದಲ್ಲಿ ಪಕ್ಷದ ವತಿಯಿಂದ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಡಿಕೆಶಿ, ಕಳೆದ ಚುನಾವಣೆಯಲ್ಲಿ ನಾನು ನನ್ನ ಪತ್ನಿ ದೊಡ್ಡ ಆಲಹಳ್ಳಿಯಲ್ಲಿ ಮತ ಹಾಕಿದ ಫೋಟೋ ಟಿವಿಯಲ್ಲಿ ಬಂದಿದ್ದಕ್ಕೆ ಆಯೋಗ ನನ್ನ ಮತವನ್ನು ರದ್ದು ಮಾಡಿದ್ದರು. ಈಗ ಜಾತಿ ವಾರು ಸಭೆ ಮಾಡುತ್ತಿರುವ ಯಡಿಯೂರಪ್ಪ ವಿರುದ್ದವೂ ಕ್ರಮ ಜರುಗಿಸಬೇಕು.
ಮೂರು ಉಪಚುನಾವಣೆಗಳಲ್ಲಿ ಈ ಸರ್ಕಾರದ ವಿರುದ್ದ ಜನತೆಗೊಂದು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು.