ಬೆಂಗಳೂರು, ಏ. 12 (DaijiworldNews/SM): ಈಗಾಗಲೇ ರಾಜ್ಯದ ಎಂಟು ನಗರಗಳಲ್ಲಿ ರಾತ್ರಿ ಕೊರೊನಾ ಕರ್ಫ್ಯೂ ಜಾರಿಗೊಳಿಸಲಾಗಿದ್ದು, ಈ ಸಮಯದಲ್ಲಿ ಹೋಟೆಲ್ ಗಳಿಗೆ ಅಲ್ಪ ವಿನಾಯಿತಿ ನೀಡಬೇಕೆಂದು ಹೋಟೆಲ್ ಮಾಲಕರ ಸಂಘ ಮನವಿ ಮಾಡಿದ್ದು, ಮನವಿಯನ್ನು ಸಚಿವ ಡಾ. ಸುಧಾಕರ್ ತಿರಸ್ಕರಿಸಿದ್ದಾರೆ.
ತಮಿಳುನಾಡು ಮಾದರಿಯಲ್ಲಿ ರಾತ್ರಿ 11 ರಿಂದ ಬೆಳಗಿನ 6 ಗಂಟೆವರೆಗೆ ಬದಲಾಯಿಸುವಂತೆ ಹೋಟೆಲ್ ಸಂಘದ ಸದಸ್ಯರು ಸಚಿವ ಡಾ. ಸುಧಾಕರ್ ಅವರಿಗೆ ಮನವಿ ಮಾಡಿದ್ದರು. ಆದರೆ, ಸಮಯ ಬದಲಾವಣೆ ಸಾಧ್ಯವಿಲ್ಲ ಎಂದು ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.
ಸದಾಶಿವನಗರದ ನಿವಾಸದಲ್ಲಿ ಸಚಿವ ಸುಧಾಕರ್ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ರಾತ್ರಿ 10 ಗಂಟೆಗೆ ಕೊರೊನಾ ಕರ್ಫ್ಯೂ ಜಾರಿಯಾಗುವುದರಿಂದ ಹೊಟೇಲ್ ಕಾರ್ಮಿಕರು ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ರಾತ್ರಿ 10 ಗಂಟೆ ಬದಲು 11 ಗಂಟೆಗೆ ವಿಸ್ತರಣೆ ಬೆಳಿಗ್ಗೆ 5 ಗಂಟೆ ಬದಲು 6 ಗಂಟೆವರೆಗೂ ವಿಸ್ತರಿಸುವಂತೆ ಮನವಿ ಮಾಡಿದ್ದರು.