ಬೆಂಗಳೂರು, ಏ 12 (DaijiworldNews/MS): ಕೊರೊನಾ ಸೋಂಕು ತೀವ್ರಗತಿಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ವ ಪಕ್ಷ ಸಭೆ ಕರೆದಿದ್ದಾರೆ. ಕೊರೋನಾ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಸಿಎಂ ಸರ್ವಪಕ್ಷಗಳ ಸಭೆ ಕರೆದಿದ್ದಾರೆ.
ಈ ಬಗ್ಗೆ ಬಸವ ಕಲ್ಯಾಣದಲ್ಲಿ ಸೋಮವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, " ಏಪ್ರಿಲ್ 18, 19ರಂದು ಎಲ್ಲಾ ಪಕ್ಷದ ಹಿರಿಯರ ಜೊತೆ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚೆ ನಡೆಸಲಿದ್ದೇವೆ" ಎಂದು ಹೇಳಿದ್ದಾರೆ.
ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಕುಮಾರಸ್ವಾಮಿ ಸೇರಿದಂತೆ ಸರ್ವ ಪಕ್ಷಗಳ ಹಿರಿಯರ ಜೊತೆ ಸಭೆ ನಡೆಸುವುದಾಗಿ ಸಿಎಂ ತಿಳಿಸಿದ್ದಾರೆ. ಸಭೆಯಲ್ಲಿ ಕಠಿಣ ನಿಯಮಗಳನ್ನು ಕೈಗೊಳ್ಳುವ ಸಾಧ್ಯತೆ ಇದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆಗುತ್ತಾ ಎಂಬುದು ಆತಂಕಕ್ಕೆ ಕಾರಣವಾಗಿದೆ.
ಇದೇ ವೇಳೆ ಕೊರೋನಾ ಕುರಿತಾಗಿ ಜನರು ಹೆಚ್ಚು ಜಾಗೃತರಾಗಿರಬೇಕು. ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕು. ಸಹಕರಿಸದಿದ್ದರೆ ಅನಿವಾರ್ಯವಾಗಿ ಲಾಕ್ ಡೌನ್ ಮೊರೆ ಹೋಗಬೇಕಾದ ಸ್ಥಿತಿ ಬರಬಹುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.